ಮಲೆನಾಡು ಟುಡೆ ಸುದ್ದಿ / ಹಸಿವಾಗಿದೆ, ತುಂಬಾ ಸುಸ್ತಾಗಿದೆ, ಊಟ ಹಾಕಿ ಎಂದು ಮನೆಗೆ ಬಂದ ವ್ಯಕ್ತಿಯೊಬ್ಬನಿಗೆ ಮನೆಯವರು ಊಟ ನೀಡಿದರೆ, ಅದೇ ವ್ಯಕ್ತಿ ಊಟ ಮುಗಿಸಿ ಹೊರಡುವಾಗ ಮನೆಯಲ್ಲಿದ್ದ ಮೊಬೈಲ್ ಕದ್ದು ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ರಥಬೀದಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ರಥಬೀದಿಯಲ್ಲಿರುವ ಮನೆಯೊಂದಕ್ಕೆ ಊಟದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದಾನೆ. ತನಗೆ ತುಂಬಾ ಸುಸ್ತಾಗಿದ್ದು, ಹಸಿವಾಗುತ್ತಿದೆ. ಊಟ ಹಾಕುವಂತೆ ಮನೆಯವರ ಬಳಿ ಕೇಳಿಕೊಂಡಿದ್ದಾನೆ. ಆತನ ಮಾತನ್ನು ನಂಬಿದ ಮನೆಯವರು ಒಳಗೆ ಕರೆದುಕೊಂಡು ಹೋಗಿ ಊಟ ನೀಡಿದ್ದಾರೆ.ಆದರೆ, ಊಟ ಮುಗಿಸಿದ ವ್ಯಕ್ತಿ ಮನೆಯಿಂದ ಹೊರಡುವಾಗ ಅಲ್ಲಿದ್ದ ಮೊಬೈಲ್ ಅನ್ನು ಕದ್ದು ಪರಾರಿಯಾಗಿದ್ದಾನೆ.
ಈ ಕಡೆ ಮನೆಯೆಲ್ಲಾ ಹುಡುಕಿದ್ರೂ ಮೊಬೈಲ್ ಸಿಗದಿದ್ದಾಗ, ಮನೆಯವರಿಗೆ ಅಂದಾಜಾಗಿದ್ದು, ಆತನೇ ಮೊಬೈಲ್ ಕದ್ಕೊಂಡು ಹೋಗಿದ್ದಾನೆ ಎಂಬ ವಿಚಾರ. ಹಾಗಾಗಿ ಪೊಲೀಸರಿಗೆ ಫೋನ್ ಹಾಯಿಸಿ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಆಕ್ಟೀವ್ ಆಗಿದ್ದು ಮೊಬೈಲ್ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಹಿಡಿದಿದ್ದಾರೆ.
