ಶಿವಮೊಗ್ಗ :  ಮಹಾನಗರ ಪಾಲಿಕೆಗೆ ಮುತ್ತಿಗೆ : ಕೆ ಎಸ್​ ಈಶ್ವರಪ್ಪರನ್ನು ವಶಕ್ಕೆ ಪಡೆದ ಪೊಲೀಸರು

ಹಂಚಿಕೊಳ್ಳಿ
WhatsApp Facebook X Telegram
Gheraos Shivamogga Corporation Over Ashraya Housing Delays
Gheraos Shivamogga Corporation Over Ashraya Housing Delays

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಬಡವರಿಗೆ ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಕಾಲಮಿತಿಯೊಳಗೆ ವಿತರಿಸುವಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಗಂಭೀರ ಆರೋಪಿಸಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಬೃಹತ್ ಪಾದಯಾತ್ರೆ ಮೂಲಕ ಪಾಲಿಕೆ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಆಶ್ರಯ ಮನೆಗಳ ಹಂಚಿಕೆಯಲ್ಲಿ ಎದುರಾಗಿರುವ ವಿಳಂಬ ಧೋರಣೆಯನ್ನು ಖಂಡಿಸಿದರು. ಬಳಿಕ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಅವರನ್ನು ಸ್ಥಳಕ್ಕೆ ಕರೆಸಿ, ನೊಂದ ಬಡವರಿಗೆ ಮನೆ ತಲುಪಿಸುವಲ್ಲಿನ ಜವಬ್ದಾರಿ ಹಾಗೂ ವಿಳಂಬಕ್ಕೆ ಕಡೇಪಕ್ಷ ಸ್ಪಷ್ಟನೆ ಕೇಳಿದರು.

ಒಟ್ಟು 6,000 ಆಶ್ರಯ ಮನೆಗಳಲ್ಲಿ ಇದುವರೆಗೆ ಕೇವಲ 450 ಮನೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ ಎಂದು ಅಂಕಿಅಂಶಗಳನ್ನು ಮುಂದಿಟ್ಟ ಪ್ರತಿಭಟನಾಕಾರರು, ಉಳಿದ ಸಾವಿರಾರು ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಇಷ್ಟೊಂದು ಮಂದಗತಿಯೇಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನಾಕಾರರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೆಲವು ಫಲಾನುಭವಿಗಳು ನಿಗದಿತ ಹಣ ಪಾವತಿಸದಿರುವುದು ಹಾಗೂ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತ ಬಾಕಿ ಇರುವುದು ವಿಳಂಬಕ್ಕೆ ಕಾರಣವಾಗಿದೆ. ಅಲ್ಲದೆ, ಜನವರಿಯಿಂದ ಮುಂದಿನ ಆರು ತಿಂಗಳ ಅವಧಿಯಲ್ಲಿ ಬಾಕಿ ಇರುವ 1,200 ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು .

ಆಯುಕ್ತರ ಈ ಉತ್ತರದಿಂದ ತೃಪ್ತರಾಗದ ರಾಷ್ಟ್ರಭಕ್ತರ ಬಳಗದ ಪ್ರಮುಖರು, ಕಾಮಗಾರಿಗಳು ನಿಜಕ್ಕೂ ನಡೆಯುತ್ತಿವೆಯೇ ಅಥವಾ ಕೇವಲ ಕಾಗದದಲ್ಲಷ್ಟೇ ಉಳಿದಿದೆಯೇ ಎಂಬುದರ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಮತ್ತೊಂದೆಡೆ ಸಚಿವರು ಗುತ್ತಿಗೆದಾರರು ಓಡಿಹೋಗಿದ್ದಾರೆ ಎಂದು ಹೇಳಿರುವುದನ್ನು ಉಲ್ಲೇಖಿಸಿ, ವಾಸ್ತವತೆಯನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಬಳಿಕ ನವೆಂಬರ್ 15ರಂದು ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಲು ನಿರ್ಧರಿಸಲಾಯಿತು. ಅಂದಿನ ಸಭೆಯಲ್ಲಿ ಮನೆಗಳ ಹಂಚಿಕೆಯ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಕಟ್ಟುನಿಟ್ಟಿನ ಪಟ್ಟುಹಿಡಿದರು.

ಇಂದಿನ ಪಾಲಿಕೆ ಮುತ್ತಿಗೆ ಕೇವಲ ಒಂದು ಸಾಂಕೇತಿಕ ಪ್ರತಿಭಟನೆ ಮಾತ್ರವಾಗಿದ್ದು, ಬಡವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಇದು ಮುಂದಿನ ಬೃಹತ್ ಹೋರಾಟದ ಆರಂಭವಷ್ಟೇ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಹಾಗೂ ಮುಖಂಡ ಇ. ವಿಶ್ವಾಸ್ ಸೇರಿದಂತೆ ಪ್ರಮುಖ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor