ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ:112 ಪೊಲೀಸ್ ಸಿಬ್ಬಂದಿಗಳು ಪ್ರತಿನಿತ್ಯ ಒಂದಲ್ಲ ಒಂದು ಮಾನವೀಯ ಕಾರ್ಯಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. 112 ಪೊಲೀಸರು ಇರುವುದು ಅಪರಾಧಗಳನ್ನು ತಡೆಯಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಮಾತ್ರವಲ್ಲ, ಎಷ್ಟೋ ನೊಂದ ಜೀವಗಳಿಗೆ ಬುದ್ಧಿಮಾತು ಹೇಳಿ ಅವರ ಜೀವವನ್ನು ಸಹ ಉಳಿಸುತ್ತಾರೆ ಎನ್ನುವುದಕ್ಕೆ ಇದೊಂದು ಘಟನೆ ನಿದರ್ಶನವಾಗಿದೆ. ರೈಲಿಗೆ ತಲೆಕೊಟ್ಟು ಸಾಯಲು ಹೊರಟಿದ್ದ ವ್ಯಕ್ತಿಯನ್ನು 112 ಸಿಬ್ಬಂದಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಅಕ್ಟೋಬರ್ 26ರ ಸಂಜೆ 112 ಸಿಬ್ಬಂದಿಗೆ ಫೋನ್ ಕರೆಯೊಂದು ಬಂದಿದೆ. ಆ ಕರೆಯನ್ನು ಸ್ವೀಕರಿಸಿ ಮಾತನಾಡಿದಾಗ, ನಮ್ಮ ಕಡೆಯವರು ತಾಳಗುಪ್ಪದಲ್ಲಿ ರೈಲಿಗೆ ತಲೆಕೊಟ್ಟು ಸಾಯುವುದಾಗಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ವಿಷಯ ತಿಳಿಯುತ್ತಿದ್ದಂತೆ, ಜೀವ ಕಳೆದುಕೊಳ್ಳಲು ಹೊರಟಿರುವ ವ್ಯಕ್ತಿಯನ್ನು ಹೇಗಾದರೂ ರಕ್ಷಿಸಲೇಬೇಕೆಂದು ಇಆರ್‌ವಿ ಸಿಬ್ಬಂದಿಯಾದ ಸಾಗರ ಗ್ರಾಮಾಂತರ ಠಾಣೆಯ ಎಎಸ್‌ಐ ಸುರೇಂದ್ರ ಕುಮಾರ್ ಹಾಗೂ ಚಾಲಕರಾದ ಎ.ಎಚ್.ಸಿ. ಶಿವಾನಂದ್ ಅವರು ಗ್ರಾಮಸ್ಥರೊಂದಿಗೆ ತಾಳಗುಪ್ಪದ ರೈಲ್ವೆ ನಿಲ್ದಾಣದ ಬಳಿ ತೆರಳಿದ್ದಾರೆ.
ಆಗ ಹಳಿಗಳ ಮೇಲೆ ಒಬ್ಬ ವ್ಯಕ್ತಿ ನಡೆದು ಹೋಗುತ್ತಿರುವುದು ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಆತನನ್ನು ತಡೆದು ನಿಲ್ಲಿಸಿ, ಬುದ್ಧಿವಾದ ಹೇಳಿ ಆತನ ಮನವೊಲಿಸುವಲ್ಲಿ 112 ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಹಿಂದೆಯೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಿವಮೊಗ್ಗದಿಂದ ಆಗುಂಬೆಗೆ ತೆರಳಿದ್ದ ವೃದ್ಧರೊಬ್ಬರನ್ನು 112 ಪೊಲೀಸರು ಹುಡುಕಿ ಮನವೊಲಿಸಿ ರಕ್ಷಣೆ ಮಾಡಿದ್ದರು.
112 ಸಿಬ್ಬಂದಿಯ ಈ ಕಾರ್ಯಕ್ಷಮತೆಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
