ಮಲೆನಾಡು ಟುಡೆ ಸುದ್ದಿ / ನಿಮಗೆ ಕೊರಿಯರ್ ಬಂದಿದೆ ಎಂದು ಕರೆ ಮಾಡಿ, ಮೊಬೈಲ್‌ನಲ್ಲಿ ನಿಮಗೆ ಬರುವ ಕಾಲ್ ಫಾರ್ವರ್ಡ್ ಮಾಡಿಕೊಳ್ಳುವ ನಿಮ್ಮ ಮೊಬೈಲ್ನ ಎಲ್ಲಾ ರಹಸ್ಯಗಳನ್ನ ತಮ್ಮ ಮೊಬೈಲ್ಗೆ ವರ್ಗಾಯಿಸಿಕೊಳ್ಳುವ ಹೊಸಥರದ ಸೈಬರ್ ಕ್ರೈಂವೊಂದು ಇದೀಗ ಆಕ್ಟೀವ್ ಆಗಿದೆ. ಇದಕ್ಕೆ ಸಾಕ್ಷಿ ಎನ್ನುವಂತಹ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾಗಿದೆ.
ಆರೋಪಿಗಳು ಕೋಡ್ ಡಯಲ್ ಮಾಡಿಸುವ ಮೂಲಕ, ಮೊಬೈಲ್ ಕಾಲ್ ಫಾರವರ್ಡ್ ಮಾಡಿಸಿಕೊಂಡು, ಜನರ ಬ್ಯಾಂಕ್ ಖಾತೆಗಳಲ್ಲಿರುವ ಹಣ ದೋಚಲು ಯತ್ನಿಸಿರುವ ಘಟನೆ ಸಂಬಂಧ ಶಿವಮೊಗ್ಗ ಜಿಲ್ಲೆಯಲ್ಲಿ ಸೈಬರ್ ಪೊಲೀಸ್ ಠಾಣೆಗೆ ದೂರುಗಳು ಸಲ್ಲಿಕೆಯಾಗಿವೆ. ಕೊರಿಯರ್ ವಿತರಣೆ ಮಾಡುವ ನೆಪದಲ್ಲಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿರುವ ವಂಚಕರು, ಮೊಬೈಲ್‌ನಲ್ಲಿ ನಿರ್ದಿಷ್ಟ ಕೋಡ್ ಹಾಗೂ ದೂರವಾಣಿ ಸಂಖ್ಯೆಯನ್ನು ಡಯಲ್ ಮಾಡುವಂತೆ ಸೂಚಿಸುತ್ತಿದ್ದಾರೆ. ಈ ಮೂಲಕ ಕರೆಗಳನ್ನು ತಮ್ಮ ಸಂಖ್ಯೆಗೆ ವರ್ಗಾಯಿಸಿಕೊಂಡು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೊಂದು ಉದಾಹರಣೆಯನ್ನು ಗಮನಿಸುವುದಾದರೆ, ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ ಕಾಲ್ ಮಾಡಿ ನಿಮಗೆ ಕೊರಿಯರ್ ಮೂಲಕ ಕೆಲವು ವಸ್ತುಗಳು ಬಂದಿವೆ. ನಮ್ಮ ಡೆಲಿವರಿ ಬಾಯ್ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ದರಿಂದ ಆತನ ಮೊಬೈಲ್ ಸಂಖ್ಯೆಯನ್ನು ನೀಡುತ್ತೇನೆ. ನೀವು ಕರೆ ಮಾಡಿ ನಿಮ್ಮ ವಿಳಾಸ ತಿಳಿಸಿದರೆ ವಸ್ತುಗಳನ್ನು ಮನೆಗೆ ತಲುಪಿಸುತ್ತಾನೆ ಎಂದು ಹೇಳಿದ್ದಾನೆ. ಕೊರಿಯರ್ ಬಂದಿದೆ ಎಂಬ ಮಾತನ್ನು ನಂಬಿದ ದೂರುದಾರರಿಗೆ ಡೆಲಿವರಿ ಬಾಯ್ನ್ನ ಸಂಪರ್ಕಿಸಲು ಕೆಲವೊಂದು ಕ್ರಮ ಹೇಳಿದ್ದಾನೆ. ಡೆಲಿವರಿ ಬಾಯ್ ಸಂಪರ್ಕಿಸಲು ಮೊಬೈಲ್ ಕೀಪ್ಯಾಡ್‌ನಲ್ಲಿ 21 ಕೋಡ್ ನಮೂದಿಸಿ, ನಂತರ 9204995564 ಸಂಖ್ಯೆಯನ್ನು ಡಯಲ್ ಮಾಡಿ, ಕೊನೆಯಲ್ಲಿ # ಬಟನ್ ಒತ್ತುವಂತೆ ಸೂಚಿಸಿದ್ದಾನೆ. ಆತನ ಮಾತಿನಂತೆ ದೂರುದಾರರು ಕೋಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ಡಯಲ್ ಮಾಡಿದ್ದಾರೆ. ಆದರೆ ಹೇಳಿದ ಸಮಯ ಕಳೆದರೂ ಯಾವುದೇ ಡೆಲಿವರಿ ಬಾಯ್ ಮನೆಗೆ ಬಂದಿಲ್ಲ. ಆನಂತರ ನೋಡಿದಾಗ, ಅವರ ಮೊಬೈಲ್ಗಲ ಕಾಲ್ ಫಾರ್ವರ್ಡ್ ಆಗಿರುವುದು ಗೊತ್ತಾಗಿದೆ. ಕೊನೆಗೆ ಪೊಲೀಸರನ್ನ ಸಂಪರ್ಕಿಸಿದಾಗ, ಇದು ಕಾಲ್ ಫಾರ್ವರ್ಡ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಹಣ ವಂಚಿಸಲು ರೂಪಿಸಿರುವ ತಂತ್ರ ಎಂಬುದು ಗೊತ್ತಾಗಿದೆ./
ಸದ್ಯ ಈ ರೀತಿಯ ಅಪರಿಚಿತ ವ್ಯಕ್ತಿಯ ಕರೆ ಹಾಗೂ ಆತ ಸೂಚಿಸಿದ ಕೋಡ್ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಸೈಬರ್ ವಂಚನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಈ ರೀತಿಯ ಕರೆಗಳು ಬಂದರೆ ತಕ್ಷಣ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದು, ಈಗಾಗಲೇ ಹಲವರು ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ ಕೊರಿಯರ್, ಡೆಲಿವರಿ ಅಥವಾ ಇತರ ಸೇವೆಗಳ ಹೆಸರಿನಲ್ಲಿ ಮೊಬೈಲ್ ಕೀಪ್ಯಾಡ್‌ನಲ್ಲಿ ಅನುಮಾನಾಸ್ಪದ ಕೋಡ್‌ಗಳನ್ನು ಡಯಲ್ ಮಾಡುವಂತೆ ಸೂಚಿಸಿದರೆ ಅದನ್ನು ಅನುಸರಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
