ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಾಲೂಕಿನ ಹೊಸಕೊಪ್ಪ ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ದೇವರಿಗೆ ತೊಡಿಸಲಾಗಿದ್ದ ಸುಮಾರು 200 ಗ್ರಾಂ ತೂಕದ, ₹20 ಲಕ್ಷ ಮೌಲ್ಯದ ಬಂಗಾರದ ಮುಖವಾಡ ಕಳುವಾಗಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಆಂಜನೇಯ ಸ್ವಾಮಿ ದೇವರಿಗೆ ಅಲಂಕರಿಸಲಾಗಿದ್ದ ಚಿನ್ನದ ಮುಖವಾಡ ನಾಪತ್ತೆಯಾಗಿರುವ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದಲ್ಲಿ ಅ.11ರಂದು ಆಂಜನೇಯ ಸ್ವಾಮಿ ದೇವರನ್ನು ಪಟ್ಟಕ್ಕೆ ಕೂರಿಸಿ, ಸುಮಾರು 200 ಗ್ರಾಂ ತೂಕದ ಬಂಗಾರದ ಮುಖವಾಡವನ್ನು ತೊಡಿಸಿ ಅಲಂಕರಿಸಲಾಗಿತ್ತು. ನವರಾತ್ರಿ ಹಬ್ಬದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಬುಧವಾರ ಬೆಳಗ್ಗೆ ದೇವಸ್ಥಾನದ ಅಧ್ಯಕ್ಷ ಶಾಂತರಾಜ್ ಅವರು ಪೂಜೆ ಸಲ್ಲಿಸುವ ಸಂದರ್ಭದಲ್ಲಿ ದೇವರಿಗೆ ಬಂಗಾರದ ಮುಖವಾಡ ಇರುವುದನ್ನು ಗಮನಿಸಿದ್ದರು. ಬಳಿಕ ಭಕ್ತರಿಗೆ ದೇವರ ದರ್ಶನ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇವಸ್ಥಾನದ ಬಾಗಿಲನ್ನು ಮುಚ್ಚದೆ ತೆರೆದಿಡಲಾಗಿತ್ತು.
ಅದೇ ದಿನ ಸಂಜೆ ಅರ್ಚಕರು ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಾಗ ದೇವರಿಗೆ ತೊಡಿಸಲಾಗಿದ್ದ ಬಂಗಾರದ ಮುಖವಾಡ ಕಾಣೆಯಾಗಿರುವುದು ಗೊತ್ತಾಗಿದೆ. ಬೆಳಗ್ಗೆ ದೇವರ ಮೇಲಿದ್ದ ಚಿನ್ನದ ಮುಖವಾಡ ಸಂಜೆ ವೇಳೆಗೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದೇವಸ್ಥಾನದ ಅಧ್ಯಕ್ಷ ಶಾಂತರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಲಾಗಿದೆ.
