ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿ ಅ.27ರಂದು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುಂದಾಗಿದ್ದಾರೆ.
ಈ ಹೋರಾಟದ ಬಗ್ಗೆ ನಿನ್ನೆ ದಿನ ಶಿವಮೊಗ್ಗದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ರಾಷ್ಟ್ರಭಕ್ತರ ಬಳಗದ ನೇತೃತ್ವದಲ್ಲಿ ಆ.27ರಂದು ಬೆಳಗ್ಗೆ 10 ಗಂಟೆಗೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಗುವುದು. ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ ಹಾಗೂ ಎನ್.ಡಿ.ವಿ. ಹಾಸ್ಟೆಲ್ ರಸ್ತೆ ಮೂಲಕ ಮೆರವಣಿಗೆ ಸಾಗಲಿದ್ದು, ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ!
- 2017ರಲ್ಲಿ ಆರಂಭವಾದ ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ 3,000 ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1,300 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಒಟ್ಟು 4,300 ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದರೂ, 9 ವರ್ಷಗಳು ಕಳೆದಿರುವ ಸಂದರ್ಭದಲ್ಲಿ ಕೇವಲ 463 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
- ಸ್ವಂತ ಸೂರಿನ ನಿರೀಕ್ಷೆಯಲ್ಲಿದ್ದ ಬಡ ಕೂಲಿ ಕಾರ್ಮಿಕರು ಸಾಲ ಮಾಡಿ, ಚಿನ್ನಾಭರಣಗಳನ್ನು ಅಡವಿಟ್ಟು ತಲಾ ₹80,000 ಪಾವತಿಸಿದ್ದಾರೆ. ಆದರೆ, ಹಣ ಪಾವತಿಸಿದರೂ ಅವರಿಗೆ ಮನೆಗಳು ದೊರೆತಿಲ್ಲ. ಮನೆ ಸಿಗುವ ನಿರೀಕ್ಷೆಯಲ್ಲಿ ಹಣ ಹೊಂದಿಸಿ ಪಾವತಿಸಿದ್ದ ಬಡವರು ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
- ಗೋವಿಂದಾಪುರದಲ್ಲಿ ವಸತಿ ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದಿರುವ ನಾಗಾರ್ಜುನ ಕನ್ಸ್ಪೆಕ್ಷನ್ಗೆ ಸರ್ಕಾರದಿಂದ ₹15 ಕೋಟಿ ಬಾಕಿ ಪಾವತಿಯಾಗಬೇಕಿದೆ. ಈ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಗುತ್ತಿಗೆದಾರರು ಕಾಮಗಾರಿ ಸ್ಥಳದಿಂದ ಯಂತ್ರೋಪಕರಣಗಳು ಹಾಗೂ ಕಾರ್ಮಿಕರನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.
- ಇನ್ನೊಂದೆಡೆ ಗೋಪಿಶೆಟ್ಟಿಕೊಪ್ಪದಲ್ಲಿ ನಡೆಯುತ್ತಿರುವ ವಸತಿ ಯೋಜನೆಯ ಕಾಮಗಾರಿಯ ಪ್ರಗತಿ ಬಗ್ಗೆಯೂ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಯೋಜನೆಯ ಪ್ರಗತಿ ಕುರಿತು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಈ ಹಿಂದೆಯೂ ರಾಷ್ಟ್ರಭಕ್ತರ ಬಳಗದ ವತಿಯಿಂದ ಪ್ರತಿಭಟನೆ ನಡೆಸಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಎರಡು ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೂಡ ಅಗತ್ಯ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಭರವಸೆ ನೀಡಿದ ಬಳಿಕವೂ ಹಣ ಬಿಡುಗಡೆಯಾಗಿಲ್ಲ. ಪರಿಣಾಮವಾಗಿ ವಸತಿ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದೆ . ಮನೆ ನಿರ್ಮಾಣಕ್ಕಾಗಿ ಹಣ ಪಾವತಿಸಿರುವ ಬಡ ಕುಟುಂಬಗಳಿಗೆ ಈವರೆಗೂ ಸೂರು ದೊರೆತಿಲ್ಲ. ಮನೆಗಾಗಿ ಸಾಲ ಮಾಡಿರುವವರು ಈಗಲೂ ಆ ಸಾಲಕ್ಕೆ ಬಡ್ಡಿ ಪಾವತಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಣ ಪಾವತಿಸಿದ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸುವಲ್ಲಿ ಆಗುತ್ತಿರುವ ವಿಳಂಬದಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ
ಕೆ.ಎಸ್. ಈಶ್ವರಪ್ಪ , ಮಾಜಿ ಡಿಸಿಎಂ
ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಯ ಕಾಮಗಾರಿಗಳನ್ನು ತಕ್ಷಣ ಪುನರಾರಂಭಿಸಬೇಕು. ಬಾಕಿ ಇರುವ ಹಣ ಬಿಡುಗಡೆ ಮಾಡಿ ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕು. ಈಗಾಗಲೇ ಹಣ ಪಾವತಿಸಿರುವ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ವಿತರಿಸುವ ಮೂಲಕ ಬಡವರ ಸ್ವಂತಮನೆಯ ಕನಸನ್ನು ನನಸು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ವಿಶ್ವಾಸ, ಮೋಹನ್ ಜಾಧವ್, ಶಂಕರ್ನಾಯ್ಕ, ಶಿವಾಜಿ ಹಾಗೂ ಬಾಲು ಉಪಸ್ಥಿತರಿದ್ದರು.
