ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ರಾಜ್ಯದಲ್ಲಿ ಅನ್ನಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಇನ್ನು ಮುಂದೆ ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಸ್ವತಃ ಪೂರ್ಣಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದಕ್ಕಾಗಿ ಆಹಾರ ಇಲಾಖೆ ಪರಿಚಯಿಸಿರುವ ‘ಅನ್ನಸೇವೆ’ ಮೊಬೈಲ್ ಆ್ಯಪ್ ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಸೇರ್ಪಡೆಗೊಂಡಿರಲಿಲ್ಲ. ಇದೀಗ ಇವತ್ತಿನಿಂದ ಅಂದರೆ, ಅಕ್ಟೋಬರ್ 14ರ ಬುಧವಾರದಿಂದ ರಾಜ್ಯಾದ್ಯಂತ ಬಳಕೆಗೆ ಲಭ್ಯವಾಗಲಿದೆ.ಪಡಿತರ ಚೀಟಿದಾರರು ಹಾಗೂ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ಈ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಇಂದಿನಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ನಸೇವೆ ಆ್ಯಪ್ ವಿಸ್ತರಣೆ
ಅಕ್ಟೋಬರ್ 1ರಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ‘ಅನ್ನಸೇವೆ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಕೆಗೆ ಅವಕಾಶ ಕಲ್ಪಿಸಲಾಗಿತ್ತು.
ಪ್ರಾಯೋಗಿಕ ಹಂತದ ಬಳಿಕ ಇದೀಗ ರಾಜ್ಯದ ಉಳಿದ ಜಿಲ್ಲೆಗಳಿಗೂ ಆ್ಯಪ್ ಸೇವೆಯನ್ನು ವಿಸ್ತರಿಸಲಾಗಿದೆ. ಬುಧವಾರದಿಂದ ಎಲ್ಲ ಜಿಲ್ಲೆಗಳ ಫಲಾನುಭವಿಗಳು ‘ಅನ್ನಸೇವೆ’ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಒಂದು ವರ್ಷದ ಹಿಂದೆ ಇ-ಕೆವೈಸಿ ಮಾಡಿಸಿದ್ದರೂ ಮತ್ತೊಮ್ಮೆ ಕಡ್ಡಾಯ
- ಒಂದು ವರ್ಷದ ಹಿಂದೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಫಲಾನುಭವಿಗಳು ಸಹ ಇದೀಗ ಮತ್ತೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕಾಗಿದೆ.
- ಈಗಾಗಲೇ ಇ-ಕೆವೈಸಿ ಮಾಡಿಸಿಕೊಂಡಿದ್ದೇವೆ ಎಂದು ಫಲಾನುಭವಿಗಳು ನಿರ್ಲಕ್ಷ್ಯ ವಹಿಸದೆ, ಮತ್ತೊಮ್ಮೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. ಇದಕ್ಕಾಗಿ ‘ಅನ್ನಸೇವೆ’ ಮೊಬೈಲ್ ಆ್ಯಪ್ ಮೂಲಕ ಸ್ವತಃ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದೆ.
- ರಾಜ್ಯದಲ್ಲಿ ಒಟ್ಟು 2,67,64,276 ಮಂದಿ ಫಲಾನುಭವಿಗಳಿದ್ದು, ಅಕ್ಟೋಬರ್ 12ರವರೆಗೆ 2,06,76,278 ಮಂದಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
- ಉಳಿದ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಇನ್ನೂ ಒಂದು ವಾರ ಕಾಲಾವಕಾಶ ನೀಡಲಾಗಿದೆ. ಅಕ್ಟೋಬರ್ 20ರೊಳಗೆ ಬಾಕಿ ಇರುವ ಫಲಾನುಭವಿಗಳು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.
ಅ.20ರವರೆಗೆ ಮಾತ್ರ ಕಾಲಾವಕಾಶ
ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳಿಗೆ ಅಕ್ಟೋಬರ್ 20ರವರೆಗೆ ಅವಕಾಶ ಕಲ್ಪಿಸಿರುವುದರಿಂದ ನಿಗದಿತ ಅವಧಿಯೊಳಗೆ ಪ್ರಕ್ರಿಯೆಯನ್ನು ಮುಗಿಸುವಂತೆ ಆಹಾರ ಇಲಾಖೆ ತಿಳಿಸಿದೆ. ‘ಅನ್ನಸೇವೆ’ ಮೊಬೈಲ್ ಆ್ಯಪ್ನ ಸೌಲಭ್ಯವನ್ನು ಬಳಸಿಕೊಂಡು ಫಲಾನುಭವಿಗಳು ಆದಷ್ಟು ಬೇಗ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.
