ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಹಾಗೂ ಪ್ರೊಫೇಸರ್ ಹಂಗೋಮ್ಟಾ ಭಿಮೋಲ್ ಹಾಕೋಜಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಅತ್ಯಾಚಾರಿ ಹಾಗೂ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಸಂಸದ ಹಾಗೂ ಪ್ರೊ. ಹಂಗೋಮ್ಟಾ ಭಿಮೋಲ್ ಹಾಕೋಜಾಂ ಅವರ ಕೃತ್ಯವನ್ನು ಖಂಡಿಸಿ ಮಹಿಳೆಯರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದ ಗೋಪಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು, ಕಾಂಗ್ರೆಸ್ ಹಾಗೂ ಆರೋಪಿ ಸಂಸದ-ಪ್ರೊಫೇಸರ್ ವಿರುದ್ಧ ಘೋಷಣೆಗಳನ್ನು ಕೂಗಿ ವಿರೋಧವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯು ತೀವ್ರಗೊಂಡ ಬಳಿಕ, ಪ್ರತಿಭಟನಾಕಾರರು ನೇರವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.
ಪ್ರತಿಭಟನಾಕಾರರು ಕಾಂಗ್ರೆಸ್ ಕಚೇರಿಯತ್ತ ನುಗ್ಗುವುದನ್ನು ತಡೆಯಲು ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಮಾರ್ಗಮಧ್ಯೆ ಬ್ಯಾರಿಕೇಡ್ಗಳನ್ನು ಅಳವಡಿಸುವುದರ ಜೊತೆಗೆ ಇಲಾಖೆಯ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿ ದಾರಿ ತಡೆಯಲಾಯಿತು. ಆದರೆ, ಇದನ್ನು ಲೆಕ್ಕಿಸದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬ್ಯಾರಿಕೇಡ್ ಹಾಗೂ ಪೊಲೀಸ್ ವಾಹನಗಳನ್ನು ದಾಟಿ ಮುಂದೆ ಸಾಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ವಾತಾವರಣ ಉದ್ವಿಗ್ನಗೊಂಡಿತು.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕೂರಿಸಲು ಮುಂದಾದಾಗ ಸ್ಥಳದಲ್ಲಿ ತೀವ್ರ ಹೈಡ್ರಾಮಾ ನಡೆಯಿತು. ಮಹಿಳಾ ಕಾರ್ಯಕರ್ತೆಯರನ್ನು ಪೊಲೀಸ್ ವಾಹನಕ್ಕೆ ಹತ್ತಿಸುವ ವೇಳೆ ನೂಕಾಟ-ತಳ್ಳಾಟ ಉಂಟಾಯಿತು. ಕೆಲವರನ್ನು ಬಲವಂತವಾಗಿ ವಾಹನಕ್ಕೆ ಕೂರಿಸಲು ಮಹಿಳಾ ಪೊಲೀಸರು ಮತ್ತು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ಯುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು.
