ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕರ್ನಾಟಕದ ಪ್ರಸಿದ್ಧ ಬಟ್ಟೆ ಮಳಿಗೆಗಳಲ್ಲಿ ಒಂದಾದ ಬಿ.ಎಸ್.ಸಿ. ಟೆಕ್ಸ್ ಟೈಲ್ಸ್’ (BSC Textiles) ನೂತನ ಶಾಖೆ ಇಂದು ಶಿವಮೊಗ್ಗದಲ್ಲಿ ಶುರುವಾಗಿದೆ. ನಗರದ ಬಿ.ಹೆಚ್. ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಮಳಿಗೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಸಮ್ಮುಖದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿದರು.
ಮಳಿಗೆಯ ಉದ್ಘಾಟನೆಯ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, 88 ವರ್ಷಗಳ ಸುದೀರ್ಘ ಹಾಗೂ ವಿಶ್ವಾಸಾರ್ಹ ಪರಂಪರೆಯನ್ನು ಹೊಂದಿರುವ ಬಿ.ಎಸ್.ಸಿ. ಸಂಸ್ಥೆಯು ಇದೀಗ ಶಿವಮೊಗ್ಗದ ಜನತೆಗೆ ಅತ್ಯುತ್ತಮ ಉಡುಪುಗಳು ಮತ್ತು ಹೋಮ್ ಫರ್ನಿಷಿಂಗ್ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ಒಂದೇ ಸೂರಿನಡಿ ತಲುಪಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ, ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, ಈ ನೂತನ ಮಳಿಗೆಯು ನಮ್ಮ ಶಿವಮೊಗ್ಗದ ವಾಣಿಜ್ಯ ಕ್ಷೇತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಹಾಗೂ ಜನತೆಗೆ ಗುಣಮಟ್ಟದ ಸೇವೆಯನ್ನು ನೀಡಲಿ ಎಂದು ಹಾರೈಸುತ್ತೇನೆ. ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಆಗಮಿಸಿದ ಎಲ್ಲಾ ಗ್ರಾಹಕ ಬಂಧುಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು, ಎಂದು ಶುಭ ಹಾರೈಸಿದ್ದಾರೆ.
