ಶಿವಮೊಗ್ಗದಲ್ಲಿ ಜೆಡಿಎಸ್ ರೈತ ಸ್ವಾಭಿಮಾನ ಯಾತ್ರೆ : ವಿಧಾನಸೌಧದ ಮುಂದೆ ಉಗ್ರ ಹೋರಾಟದ ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
ನಿಖಿಲ್__ ಕುಮಾರ ಸ್ವಾಮಿ ಮಾತು
ನಿಖಿಲ್__ ಕುಮಾರ ಸ್ವಾಮಿ ಮಾತು

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ/ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತ್ಯಾಜವಳ್ಳಿ ಹಾಗೂ ಆಯನೂರು ಗ್ರಾಮಗಳಿಗೆ ಭೇಟಿ ನೀಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಳೆ ಕೊರತೆಯಿಂದ ಸಂಪೂರ್ಣವಾಗಿ ಒಣಗಿದ ಮೆಕ್ಕೆಜೋಳದ ಬೆಳೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಆಗಮಿಸಿದ ಅವರನ್ನು ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ರೈತರ ಹೊಲಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿನ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.  

ಈ ವರ್ಷದ ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ಸುಮಾರು 55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು, ಆದರೆ ಮಳೆಯ ಕೊರತೆಯಿಂದ ಬೆಳೆಗಳೆಲ್ಲ ಒಣಗುತ್ತಿದ್ದು ರೈತರು ಹಿಂದೆಂದೂ ಕಾಣದಂತಹ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕೃಷಿಕರು ಬಿತ್ತನೆ ಬೀಜ, ಗುಣಮಟ್ಟದ ರಸಗೊಬ್ಬರ, ಕೂಲಿ ಹಾಗೂ ಔಷಧ ಸಿಂಪಡಣೆಗಾಗಿ ಎಕರೆಗೆ ಕನಿಷ್ಠ 25,000 ದಿಂದ 30,000 ವರೆಗೆ ಖರ್ಚು ಮಾಡಿದ್ದಾರೆ. 

ಬೆಳೆ ನಷ್ಟದಿಂದಾಗಿ ಹೂಡಿಕೆ ಮಾಡಿದ ಹಣವೂ ವಾಪಸ್ ಬಾರದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ, ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ ₹25 ಸಾವಿರ ಪರಿಹಾರವನ್ನು ನೀಡಲೇಬೇಕು ಎಂದು ಅವರು ಆಗ್ರಹಿಸಿದರು. 

ಶಿವಮೊಗ್ಗ ಜಿಲ್ಲೆಯ ಎಲ್ಲಾ  ತಾಲೂಕುಗಳಲ್ಲಿಯೂ ಬರದ ಛಾಯೆ ಇದ್ದರೂ, ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲ್ಲ ಎಂಬುದನ್ನು ನಿಖಿಲ್ ಆಕ್ಷೇಪಿಸಿದರು. ರಾಜ್ಯದ ಬರಪೀಡಿತ ಪ್ರದೇಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಅರ್ಹವಿರುವ ಎಲ್ಲಾ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಗುಣಮಟ್ಟದ ಬಿತ್ತನೆ ಬೀಜ, ಯೂರಿಯಾದಂತಹ ಅಗತ್ಯ ಗೊಬ್ಬರಗಳ ಲಭ್ಯತೆ ಕೊರತೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಸರ್ಕಾರ ತಕ್ಷಣವೇ ಗೋಶಾಲೆಗಳನ್ನು (ಮೇವಿನ ಬ್ಯಾಂಕ್) ತೆರೆಯಬೇಕು. ಬೆಳೆ ನಷ್ಟದ ಜಂಟಿ ಸಮೀಕ್ಷೆಗಳನ್ನು ಕಾಲಮಿತಿಯೊಳಗೆ ನಡೆಸಿ, ಫಸಲ್‌ ಬಿಮಾ ಯೋಜನೆಯ ಪರಿಹಾರವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೆ, ಜಿಲ್ಲೆಯಲ್ಲಿ ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಔಷಧ ಸಿಂಪಡಣೆಯ ಹೆಚ್ಚುವರಿ ವೆಚ್ಚದಿಂದ ರೈತರು ಕಂಗೆಟ್ಟಿದ್ದು, ಇಂತಹ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಧಾವಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.  ಸಾಲದ ಹೊರೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹಾಗೂ ಚಕ್ರಬಡ್ಡಿಯ ಸಮಸ್ಯೆಗಳಿಂದ ರೈತರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ, ಇದರ ಪರಿಣಾಮವಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. 

ಬರ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದತ್ತ ಬೆರಳು ತೋರಿಸಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ 14 ತಿಂಗಳ ಆಡಳಿತಾವಧಿಯಲ್ಲಿ 28 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದ ದೃಢ ನಿರ್ಧಾರವನ್ನು ನೆನಪಿಸಿದರು. ಅಂತಹ ಇಚ್ಛಾಶಕ್ತಿ ಈಗಿನ ಸರ್ಕಾರಕ್ಕೂ ಇರಬೇಕು ಎಂದು ಅವರು ಸವಾಲು ಹಾಕಿದರು.   ಜೆಡಿಎಸ್ ಪಕ್ಷವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾರ್ಗದರ್ಶನ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲೂ ರೈತರ ಸಮಸ್ಯೆಗಳನ್ನು ಆಲಿಸಲು ಈ ಸ್ವಾಭಿಮಾನ ಯಾತ್ರೆ ನಡೆಸುತ್ತಿದೆ. ಸರ್ಕಾರ ರೈತರ ಸಮಸ್ಯೆಗಳನ್ನು ಇದೇ ರೀತಿ ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ರೈತರೆಲ್ಲರೂ ಒಗ್ಗೂಡಿ ವಿಧಾನಸೌಧದ ಮುಂದೆ ಉಗ್ರ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor