ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ನಿಮ್ಮ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ, ಎಚ್ಚರದಿಂದಿರಿ ಎಂದು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಮಾತು ಅಕ್ರಮ ಸಂಬಂಧವನ್ನು ಮುಚ್ಚಿಕೊಂಡು ಮುಂದುವರಿಸಿ ಎಂದು ಹೇಳಿದಂತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಅವರು, ಐವರು ಸಚಿವರಿಗೆ ನಿಮ್ಮ ವಿರುದ್ಧ ಸ್ಟಿಂಗ್ ಆಪರೇಷನ್ ಹಾಗೂ ಹನಿಟ್ರ್ಯಾಪ್ ನಡೆಯುತ್ತಿದೆ, ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯಾದವರು ಈ ರೀತಿ ಹೇಳುವುದು ಸರಿಯಲ್ಲ. ಕೆಲವೊಮ್ಮೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಏನಿದು ಹನಿಟ್ರ್ಯಾಪ್ ಎಂದು ಕೇಳಿದರೆ ಉತ್ತರ ಹೇಳುವುದಕ್ಕೂ ನಾಚಿಕೆಯಾಗುತ್ತದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ಸಹ ಇದೇ ತಂತ್ರ ಬಳಸಲಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ಸರ್ಕಾರವನ್ನು ಬುಡಮೇಲು ಮಾಡಲು ಸಚಿವರ ಸ್ಟಿಂಗ್ ಆಪರೇಷನ್ ನಡೆಯುತ್ತದೆ ಎಂದಾದರೆ, ಪ್ರಜಾಪ್ರಭುತ್ವಕ್ಕೆ, ಮತ ಹಾಕಿದ ಜನರಿಗೆ ಏನು ಅರ್ಥ ಬರುತ್ತದೆ ಎಂದು ಪ್ರಶ್ನಿಸಿದರು.
ನಾನು ಇದನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ. ಯಾರು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಎಂಬುದು ಸಿಎಂಗೆ ಮೊದಲೇ ಗೊತ್ತಿದ್ದರೆ, ಅಂಥವರನ್ನು ಸಂಪುಟದಿಂದ ಮೊದಲು ಕಿತ್ತುಹಾಕಬೇಕು ಅಥವಾ ಖಾಸಗಿಯಾಗಿ ಕರೆದು ಬುದ್ಧಿವಾದ ಹೇಳಬೇಕು. ರಾಜ್ಯದಲ್ಲಿ ಕುಡಿಯಲು ನೀರಿಲ್ಲ, ಮೇವಿಲ್ಲ, ಚರ್ಚಿಸಲು ಎಷ್ಟೋ ಸಮಸ್ಯೆಗಳಿವೆ. ಆದರೆ ಸಿಎಂ ಕ್ಯಾಬಿನೆಟ್‌ನಲ್ಲಿ ಐವರು ಸಚಿವರ ಬಗ್ಗೆ ಈ ರೀತಿ ಮಾತನಾಡುತ್ತಾರೆ ಎಂದರೆ ಏನರ್ಥ? ಮೊನ್ನೆ ನೋಡಿದರೆ ಸಾಧು-ಸಂತರ ಬಗ್ಗೆ ಮಾತನಾಡಿದ್ದರು, ಈಗ ನೋಡಿದರೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಈ ಬಗ್ಗೆ ನಿಮಗೆ ಅನುಮಾನ ಬಂದರೆ ಪರವಾಗಿಲ್ಲ, ಆದರೆ ಆ ಶಾಸಕರ ಹೆಂಡತಿಯರಿಗೆ ಅನುಮಾನ ಬಂದರೆ ಗತಿಯೇನು? ತಪ್ಪು ಮಾಡಿದವರನ್ನು ಕಿತ್ತುಹಾಕುವುದು ಬಿಟ್ಟು ತನಿಖೆ ಯಾಕೆ ಮಾಡಬೇಕು? ಅಕ್ರಮ ಸಂಬಂಧವನ್ನು ನಿಲ್ಲಿಸಿ ಎಂದು ಇವರು ಹೇಳಿಲ್ಲ, ಬದಲಾಗಿ ಮುಚ್ಚಿಕೊಂಡು ಮುಂದುವರಿಸಿ ಎನ್ನುವಂತೆ ಸಿಎಂ ಮಾತನಾಡಿದ್ದಾರೆ. ಇಂತಹ ಮುಖ್ಯಮಂತ್ರಿ, ಇಂತಹ ಸರ್ಕಾರ ಮತ್ತು ಸಚಿವರನ್ನು ಪಡೆದಿರುವುದಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದರು.
