ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಸಾಮಾಜ ವಾದಿ ಪಕ್ಷದಿಂದಲೂ ಆಹ್ವಾನ ಬಂದಿದೆ. ಇತ್ತ ಪಕ್ಕದ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ನೇತೃತ್ವದ ಜನಸೇನಾದಿಂದಲೂ ಕರೆ ಬಂದಿದೆ. ಈಗಾಗಲೇ 3 ಬಾರಿ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರ ಸಭೆ ನಡೆಸಿರುವ ಮಾಜಿ ಡಿಸಿಎಂ ರಾಜಕೀಯ ನಡೆ ಕುತೂಹಲ ಮೂಡುವಂತೆ ಮಾಡಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದ್ದು, ಒಂದೂವರೆ ವರ್ಷದ ಬಳಿಕ ವಿಧಾನಸಭಾ ಚುನಾವಣೆಗಳೂ ನಡೆಯಲಿವೆ. ಈ ನಡುವೆ ಮಲೆನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ರಾಷ್ಟ್ರಭಕ್ತರ ಬಳಕ ಕಟ್ಟಿ ಆ ಮೂಲಕ ಮುಂಬರುವ ಚುನಾವಣೆಗೆ ತಯಾರಿ ನಡೆಸಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದಿಂದಲೂ ರಾಜ್ಯದಲ್ಲಿ ಉನ್ನತ ಸ್ಥಾನದ ಆಫರ್ ನೀಡಲಾಗಿದೆ. ಇನ್ನೊಂದೆಡೆ ಆಂಧ್ರದ ಡಿಸಿಎಂ ಹಾಗೂ ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ಪವನ್ ಕಲ್ಯಾಣ ಅವರ ಜನಸೇನಾದಿಂದಲೂ ಪಕ್ಷ ಸೇರ್ಪಡೆ ಮಾಡಿ, ಕರ್ನಾಟಕದಲ್ಲಿ ಜವಾಬ್ದಾರಿ ಹೊತ್ತುಕೊಂಡು ಪಕ್ಷ ಸಂಘಟನೆ ಮಾಡಲು ಆಹ್ವಾನ ನೀಡಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಬಿ.ವೈ. ವಿಜಯೇಂದ್ರ ಜೊತೆಯೂ ಮಾತುಕತೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜೊತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಮಾತುಕತೆ ನಡೆಸಿಲ್ಲ. ಆದರೆ, ಅವರ ಪುತ್ರ ಕೆ.ಈ. ಕಾಂತೇಶ್ ಅವರು ಕೆಲ ತಿಂಗಳ ಹಿಂದೆ ಬುಲಾವ್ ಮೇರೆಗೆ ಹಾವೇರಿಗೆ ತೆರಳಿ ಬಿ.ವೈ. ವಿಜಯೇಂದ್ರ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಭರವಸೆ ನೀಡಿದರೆ ಮಾತ್ರ ಬಿಜೆಪಿಗೆ
ಬಿಜೆಪಿಗೆ ಮರಳಿ ಸೇರುವ ಕುರಿತು ನಗರದ ಪದಾಧಿಕಾರಿಗಳು ಸೇರಿದಂತೆ ೫೦ ಪ್ರಮುಖರೊಂದಿಗೆ ಮೂರು ಹಂತಗಳಲ್ಲಿ ಚರ್ಚೆ ನಡೆಸಿದ್ದೇನೆ. ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಗೆ ಸ್ಪರ್ಧಿಸುವಂತೆ ಅವರೆಲ್ಲರೂ ಸಲಹೆ ನೀಡಿದ್ದಾರೆ. ಅವರ ಸಲಹೆಗಳನ್ನು ನಾನು ಮೀರುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ೧೦೦ರಷ್ಟು ಸ್ಪರ್ಧೆ ಮಾಡುವುದು ಖಚಿತ ಎಂದಿರುವ ಅವರು ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ್ದು ಆರ್ಎಸ್ಎಸ್. ಆರ್ಎಸ್ಎಸ್ನ ಪ್ರಮುಖರು ಬಂದು ಬಿಜೆಪಿಗೆ ಸೇರುವಂತೆ ಹೇಳಿದ್ದರು. ಆ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಈ ಹಿಂದೆ ನನಗೆ ಟಿಕೆಟ್ ಏಕೆ ನೀಡಲಿಲ್ಲ ಎಂಬುದು ಗೊತ್ತಿಲ್ಲ. ಆದರೆ ಈ ಬಾರಿ ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಗೆ ನಿಂತು ಗೆದ್ದು ಬನ್ನಿ. ಯಾರ್ಯಾರೋ ಹೇಳಿದರು ಎಂದು ಹೋಗಿ, ಕಳೆದ ಬಾರಿಯಂತೆ ಆಗುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎಂದಿದ್ದಾರೆ. ಬಿಜೆಪಿ ನನ್ನ ಮಾತೃಪಕ್ಷ ಅದನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸೇರಿಸಿಕೊಳ್ಳದಿದ್ದರೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ನಾನೇ ಬಿಜೆಪಿಗೆ ಹೋಗುತ್ತೇನೆ ಎಂದಿದ್ದಾರೆ.
ಬಿಜೆಪಿಯಲ್ಲಿ ಕುರುಬ ನಾಯಕನ ಕೊರತೆ
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಕುರುಬ ನಾಯಕರ ಕೊರತೆ ಇದೆ. ಸಿದ್ದರಾಮಯ್ಯ ನಂತರ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಕಾಂಗ್ರೆಸ್ನಲ್ಲಿ ಇದ್ದಂತೆ, ಬಿಜೆಪಿಯಲ್ಲೂ ಕುರುಬ ನಾಯಕ ಯಾರು..? ಎಂಬ ಪ್ರಶ್ನೆ ಉದ್ಭವಿಸಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ರಾಜಕೀಯ ಅನುಭವವೂ ಇದೆ. ಪಕ್ಷದ ನಿರ್ಧಾರಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ ಜೊತೆಗೆ ಹಿಂದೂ ಧರ್ಮದ ರಕ್ಷಕರೆನಿಸಿಕೊಂಡಿದ್ದು ಯಾವುದೇ ಸಂದರ್ಭದಲ್ಲೂ ವಿಪಕ್ಷದವರ ವಿರುದ್ಧ ತಿರುಗಿಬೀಳುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಆ ನಿಟ್ಟಿನಲ್ಲಿ ವಾಪಸ್ ಬಿಜೆಪಿಗೆ ಕರೆ ತರುವ ಕುರಿತು ಚರ್ಚೆಗಳು ನಡೆಯುತ್ತಿದ್ದರೂ ಉನ್ನತ ಮಟ್ಟದಲ್ಲಿ ಮತುಕತೆಗಳು ಸಮರ್ಪಕವಾಗಿ ನಡೆಯದೇ ಇರುವುದು ಘಾರ್ ವಾಪ್ಸಿಗೆ ಹಿನ್ನಡೆಯುಂಟಾಗಿದೆ. ಸದ್ಯ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕೆ.ಎಸ್. ಈಶ್ವರಪ್ಪನವರು ನವೆಂಬರ್ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿರುವುದು ರಾಜಕೀಯವಾಗಿ ಕುತೂಹಲ ಮೂಡುವಂತೆ ಮಾಡಿದೆ.
