ಮಲೆನಾಡು ಟುಡೆ ಸುದ್ದಿ / ಸಾಗರ : ನಗರದ ಜೋಗ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ ಒಂದರ ಕೊಠಡಿಯಲ್ಲಿ ಯುವತಿ ಸೇರಿದಂತೆ ನಾಲ್ವರು ಗಾಂಜಾ ಸೇವನೆ ಮಾಡುತ್ತಿದ್ದಾಗ ದಾಳಿ ನಡೆಸಿದ ಸಾಗರ ಟೌನ್ ಪೊಲೀಸರು, ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೋಗ ರಸ್ತೆಯಲ್ಲಿರುವ ಲಾಡ್ಜ್ನ ಕೊಠಡಿಯೊಂದರಲ್ಲಿ ಕೆಲ ಯುವಕ-ಯುವತಿಯರು ಗಾಂಜಾ ಸೇವಿಸುತ್ತಿದ್ದಿದ್ದರ ಬಗ್ಗೆ ಎಎಸ್ಪಿ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಠಾಣೆಯ ಸಿಬ್ಬಂದಿ ಲಾಡ್ಜ್ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊಠಡಿಯಲ್ಲಿದ್ದ ಮೂವರು ಯುವಕರು ಮತ್ತು ಒಬ್ಬಳು ಯುವತಿ ಅಸಹಜವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
ಪೋಲಿಸರು ಸ್ಥಳ ತಪಾಸಣೆ ನಡೆಸಿದಾಗ ಟೇಬಲ್ ಮೇಲೆ ಸಿಗರೇಟ್ ತುಂಡುಗಳು ಪತ್ತೆಯಾಗಿದ್ದು, ಸಿಗರೇಟ್ ಒಳಗಿನ ತಂಬಾಕನ್ನು ತೆಗೆದು ಗಾಂಜಾ ತುಂಬಿ ಸೇದುತ್ತಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ನಿನ್ನೆ ಮತ್ತು ಇಂದು ಅದೇ ಕೊಠಡಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಬಳಿಕ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಅವರು ಗಾಂಜಾ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
