ಶಿವಮೊಗ್ಗ : ತುಂಗಭದ್ರಾ ಮರಳಲ್ಲಿಯು ಚಿನ್ನದ ಕಣ! ಶಿವಮೊಗ್ಗದ ನೆಲದೊಳಗಿದೆ ಮರೆತುಹೋದ ಗೋಲ್ಡ್ ಸ್ಟೋರಿ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದ ಮಣ್ಣಲ್ಲಿ ಅಡಗಿದೆ ಅಪರೂಪದ ಇತಿಹಾಸ
ಶಿವಮೊಗ್ಗದ ಮಣ್ಣಲ್ಲಿ ಅಡಗಿದೆ ಅಪರೂಪದ ಇತಿಹಾಸ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಎಂದರೆ ಮಲೆನಾಡು, ನದಿಗಳು, ಜಲಪಾತಗಳು, ಅಡಿಕೆ ತೋಟಗಳು ನೆನಪಾಗುತ್ತವೆ. ಆದರೆ ಇದೇ ಜಿಲ್ಲೆಯ ನದಿಯ ಮರಳಿನಲ್ಲಿ ಒಂದು ಕಾಲದಲ್ಲಿ ಚಿನ್ನದ ಕಣಗಳನ್ನು ಹುಡುಕಲಾಗುತ್ತಿತ್ತು. ಕೆಲವು ಪ್ರದೇಶಗಳಲ್ಲಿ ಚಿನ್ನದ ಅದಿರಿನ ಗುರುತುಗಳು ಪತ್ತೆಯಾಗಿದ್ದವು ಕುದುರೆಕೊಂಡ-ಪಲವನಹಳ್ಳಿ ಸುತ್ತಮುತ್ತ ಚಿನ್ನದ ಗಟ್ಟಿ ದೊರೆತಿದ್ದ ದಾಖಲೆಗಳೂ ಇವೆ. ಈ ಸಂಗತಿಗಳು ಕೇವಲ ಜನಪದ ಕಥೆಗಳಲ್ಲ, ಹಳೆಯ ಮೈಸೂರು ಗೆಜೆಟಿಯರ್, ಕರ್ನಾಟಕ ರಾಜ್ಯ ಗೆಜೆಟಿಯರ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲೂ ದಾಖಲಾಗಿವೆ.’ 1929ರಲ್ಲಿ ಸರ್ಕಾರಿ ಮುದ್ರಣಾಲಯದಿಂದ ಪ್ರಕಟವಾದ ***Mysore Gazetteer ಗಣಿಗಾರಿಕೆ ಮತ್ತು ಖನಿಜಗಳ ಕುರಿತ ಭಾಗದಲ್ಲಿ ಶಿವಮೊಗ್ಗ ಜಿಲ್ಲೆಯಕುದುರೆಕೊಂಡ ಪ್ರದೇಶವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.

ಪಲವನಹಳ್ಳಿ ಸಮೀಪದ ಈ ಭಾಗವನ್ನು ಆಗ ಹೊನ್ನಾಳಿ ಗೋಲ್ಡ್ ಫೀಲ್ಡ್ ಎಂದು ಗುರುತಿಸಲಾಗಿತ್ತು. ಈ ಪ್ರದೇಶದಲ್ಲಿ ಹಳೆಯ ಚಿನ್ನದ ಗಣಿಗಾರಿಕೆಯ ಗುರುತುಗಳಿದ್ದು, ಚಿನ್ನದ ಗಟ್ಟಿಯೊಂದು ದೊರೆತಿದ್ದ ಸಂಗತಿಯನ್ನೂ ಮೈಸೂರು ಗೆಜೆಟಿಯರ್ ದಾಖಲಿಸಿದೆ.

ಅದೇ ಮೈಸೂರು ಗೆಜೆಟಿಯರ್​ನಲ್ಲಿಯೂ ಇನ್ನೂ ಕುತೂಹಲಕಾರಿ ದಾಖಲೆ ಇದೆ. ಶಿವಮೊಗ್ಗದ ಹೊಳಲೂರು ಸಮೀಪ ತುಂಗಭದ್ರಾ ನದಿಯ ಕಲ್ಲುಮಿಶ್ರಿತ ಮರಳಿನಲ್ಲಿ ಸಣ್ಣ ಪ್ರಮಾಣದಲ್ಲಿ ಚಿನ್ನ ದೊರೆಯುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ನದಿಯ ಮರಳನ್ನು ಸೋಸಿ ಚಿನ್ನದ ಸಣ್ಣ ಕಣಗಳನ್ನು ಬೇರ್ಪಡಿಸುವ ಕೆಲಸ ಹಿಂದಿನ ಕಾಲದಲ್ಲಿ ನಡೆಯುತ್ತಿತ್ತು. ಗೆಜೆಟಿಯರ್ ಸಿದ್ಧವಾಗುವ ವೇಳೆಗೆ ಈ ಕೆಲಸದಲ್ಲಿ ತೊಡಗಿದ್ದ ಸಂಖ್ಯೆಯಲ್ಲಿ ಉಳಿದಿದ್ದವು. ಕುಟುಂಬಗಳು ಕೆಲವೇ ಚಿನ್ನದ ಪ್ರಮಾಣ ಕಡಿಮೆಯಾಗಿದ್ದ ಕಾರಣ ಹಾಗೂ ಸಾಕಷ್ಟು ನೀರಿನ ಲಭ್ಯತೆ ಇಲ್ಲದ ಕಾರಣ ಇದನ್ನು ದೊಡ್ಡ ಪ್ರಮಾಣದ ಉದ್ಯಮವನ್ನಾಗಿ ನಡೆಸಲು ಸಾಧ್ಯವಾಗಿರಲಿಲ್ಲ ಎಂದೂ ಅದರಲ್ಲಿ ವಿವರಿಸಲಾಗಿದೆ. 1975ರಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ‘Karnataka State Gazetteer: Shimoga District’ ಈ ಚಿನ್ನದ ಕಥೆಗೆ ಇನ್ನಷ್ಟು ವಿವರ ನೀಡುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಗಣಿಗಾರಿಕೆ ಬಹಳ ಹಳೆಯ ಉದ್ಯಮಗಳಲ್ಲಿ ಒಂದಾಗಿದ್ದು, ಪ್ರಾಚೀನ ಗಣಿಗಾರಿಕೆಯ ಗುರುತುಗಳು. ಜಿಲ್ಲೆಯ ಹಲವು ಕಡೆ ಕಂಡುಬರುತ್ತವೆ ಎಂದು ಈ ಗೆಜೆಟಿಯರ್ ದಾಖಲಿಸಿದೆ. ಹಿಂದಿನ ಕಾಲದ ಜನರಿಗೆ ಅದಿರು ಮತ್ತು ಲೋಹಗಳ ಕುರಿತು ತಿಳುವಳಿಕೆ ಇತ್ತು ಎಂಬುದಕ್ಕೆ ಈಗುರುತುಗಳು ಸಾಕ್ಷಿಯಾಗಿದ್ದರೂ, ಅವರು ಬಳಸುತ್ತಿದ್ದ ಗಣಿಗಾರಿಕೆ ಮತ್ತು ಲೋಹ ಸಂಸ್ಕರಣೆಯ ವಿಧಾನಗಳ ಸಂಪೂರ್ಣ ವಿವರಗಳು ಲಭ್ಯವಿಲ್ಲ ಎಂದು ಹೇಳಲಾಗಿದೆ. ಇದೇ 1975ರ ಶಿವಮೊಗ್ಗ ಜಿಲ್ಲಾ ಗೆಜೆಟಿಯರ್‌ನಲ್ಲಿ ಕುದುರೆಕೊಂಡ ಪಲವನಹಳ್ಳಿ ಪ್ರದೇಶ ಮತ್ತು ಹೊನ್ನೆಹಟ್ಟಿ ಚಿನ್ನದ ದೃಷ್ಟಿಯಿಂದ ಪ್ರಮುಖ ಪ್ರದೇಶಗಳೆಂದು ದಾಖಲಿಸಲಾಗಿದೆ. 

ಅಲ್ಲಿನ ಶಿಲಾಪದರಗಳ ನಡುವೆ ಹಾದುಹೋಗಿರುವ ಬೆಣಚುಕಲ್ಲಿನ ಸಿರಗಳಲ್ಲಿ ಚಿನ್ನವು ಸ್ವತಂತ್ರ ಲೋಹದ ರೂಪದಲ್ಲಿ ಕಂಡುಬಂದಿದೆ ಎಂದು ವಿವರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯೊಳಗೆ ಹರಿಯುವ ತುಂಗಭದ್ರಾ ಮತ್ತು ಅದರ ಪ್ರಮುಖ ಉಪನದಿಗಳ ದಡದ ಮೆಕ್ಕಲು ಮಣ್ಣಿನಲ್ಲಿಯೂ ಸಣ್ಣ ಚಿನ್ನದ ಕಣಗಳು ವಿರಳವಾಗಿ ಹರಡಿರುವುದು ಕಂಡುಬಂದಿದೆ ಎಂದು ಗೆಜೆಟಿಯರ್ ಹೇಳುತ್ತದೆ. ಇನ್ನೊಂದು ಕುತೂಹಲಕಾರಿ ದಾಖಲೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ‘ಕರ್ನಾಟಕದ ಖನಿಜ ನಿಕ್ಷೇಪಗಳು’ ಎಂಬ ವಿಭಾಗದಲ್ಲಿದೆ. ಶಿವಮೊಗ್ಗದ ಹೊನ್ನಾಳಿ ಬಳಿಯ ಕುದುರೆಕೊಂಡ ಮತ್ತು ಪಲವನಹಳ್ಳಿ ಸುತ್ತಮುತ್ತ ಚಿನ್ನ ದೊರೆತಿದ್ದುದನ್ನು ವಿಶ್ವಕೋಶ ಉಲ್ಲೇಖಿಸುತ್ತದೆ. ತುಂಗಾ ನದಿಯ ಮೆಕ್ಕಲು ಪ್ರದೇಶದಲ್ಲಿಯೂ ಚಿನ್ನ ಬೆರೆತ ಕಲ್ಲು ದೊರೆತಿದ್ದ ದಾಖಲೆಯನ್ನು ಅದು ನೀಡುತ್ತದೆ. ನದಿಯ ಮೆಕ್ಕಲು ಮಣ್ಣಿನಿಂದ ಚಿನ್ನವನ್ನು ಸೋಸಿ ತೆಗೆಯುವ ವಿಧಾನವನ್ನು ತಿಳಿದಿದ್ದ ಕುಟುಂಬಗಳು ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಕೆಲಸ ಮಾಡುತ್ತಿದ್ದವು ಎಂಬ ಮಾಹಿತಿಯೂ ವಿಶ್ವಕೋಶದಲ್ಲಿದೆ. 

ಇದೇ ವಿಶ್ವಕೋಶದಲ್ಲಿ ಶಿವಮೊಗ್ಗ ಜಿಲ್ಲೆಯ ಮತ್ತೊಂದು ಪ್ರದೇಶದ ಕುರಿತು ಇನ್ನಷ್ಟು ವಿಶೇಷ ಮಾಹಿತಿ ಸಿಗುತ್ತದೆ. ಅಲ್ಲಿ ಹಳೆಯ ಗಣಿಗಾರಿಕೆಯ ಗುರುತುಗಳಿದ್ದು, ಸುಮಾರು 70 ಮೀಟರ್ ಆಳದವರೆಗೂ ತೋಡಲಾಗಿದ್ದ ಗಣಿಗಳ ವಿವರವನ್ನು ಉಲ್ಲೇಖಿಸಲಾಗಿದೆ. 1913ರಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಸಿದ ಗಣಿ ಕಾರ್ಯಾಚರಣೆಯಲ್ಲಿ ಒಂದು ಟನ್ ಅದಿರಿನಲ್ಲಿ ಸುಮಾರು 15.5 ಗ್ರಾಂ ಚಿನ್ನ ಇರುವುದಾಗಿ ಕಂಡುಬಂದಿತ್ತು ಎಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ದಾಖಲಿಸಿದೆ. ಇವೆಲ್ಲವನ್ನು ಒಟ್ಟಾಗಿ ನೋಡಿದಾಗ ಶಿವಮೊಗ್ಗದ ಚಿನ್ನದ ಕಥೆ ಒಂದೇ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ ಎಂಬುದು ಗೊತ್ತಾಗುತ್ತದೆ. ಒಂದು ಕಡೆ ಕುದುರೆಕೊಂಡ-ಪಲವನಹಳ್ಳಿ ಭಾಗದ ಶಿಲೆಗಳಲ್ಲಿ ಚಿನ್ನದ ಗುರುತು, ಮತ್ತೊಂದು ಕಡೆ ಹೊನ್ನಹಟ್ಟಿಯ ಬೆಣಚುಕಲ್ಲಿನ ಸಿರೆಗಳಲ್ಲಿ ಚಿನ್ನ. ಇನ್ನೊಂದೆಡೆ ತುಂಗಭದ್ರಾ ಮತ್ತು ಅದರ ಉಪನದಿಗಳ ಮೆಕ್ಕಲು ಮಣ್ಣಿನಲ್ಲಿ ಸಣ್ಣ ಚಿನ್ನದ ಕಣಗಳು-ಹೀಗೆ ಜಿಲ್ಲೆಯ ಹಲವು ಭಾಗಗಳೊಂದಿಗೆ ಚಿನ್ನದ ನಂಟು ದಾಖಲೆಗಳಲ್ಲಿ ಕಾಣಿಸುತ್ತದೆ. ಆದರೆ ಶಿವಮೊಗ್ಗ ಮತ್ತೊಂದು ಕೋಲಾರ ಚಿನ್ನದ ಗಣಿ ಆಗಲಿಲ್ಲ. 1929ರ ಮೈಸೂರು ಗೆಜೆಟಿಯರ್ ಹೇಳುವಂತೆ, ಕೆಲವು ಪ್ರದೇಶಗಳಲ್ಲಿ ಚಿನ್ನದ ಅದಿರು ಕಂಡುಬಂದಿದ್ದರೂ ಅದರ ಸಿರಗಳು ಚಿಕ್ಕದಾಗಿದ್ದವು ಮತ್ತು ನಿರಂತರವಾಗಿರಲಿಲ್ಲ. ನದಿಮಣ್ಣಿನಲ್ಲಿ ದೊರೆಯುತ್ತಿದ್ದ ಚಿನ್ನದ ಪ್ರಮಾಣವೂ ಅಲ್ಪವಾಗಿತ್ತು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಲಾಭದಾಯಕ ಗಣಿಗಾರಿಕೆ ಸ್ಥಾಪನೆಯಾಗಲಿಲ್ಲ. ಇಂದು ತುಂಗಾ-ಭದ್ರಾ ನದಿಗಳ ತೀರದಲ್ಲಿ ನಿಂತಾಗ ಅಲ್ಲಿ ಚಿನ್ನ ಹುಡುಕುತ್ತಿದ್ದ ಕಾಲವನ್ನು ಊಹಿಸಿಕೊಳ್ಳುವುದು ಸುಲಭವಲ್ಲ. ಆದರೆ ಹಳೆಯ ದಾಖಲೆಗಳು ಶಿವಮೊಗ್ಗದ ನೆಲದ ಇನ್ನೊಂದು ಮುಖವನ್ನು ತೆರೆದಿಡುತ್ತವೆ. ಮಲೆನಾಡಿನ ಹಸಿರು, ನದಿ, ಮಳೆ ಮತ್ತು ಅಡಿಕೆಯ ಕಥೆಗಳ ನಡುವೆ ಚಿನ್ನದ ಕಣಗಳ ಮರೆತುಹೋದ ಅಧ್ಯಾಯವೂ ಶಿವಮೊಗ್ಗದ ಇತಿಹಾಸದಲ್ಲಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor