ಶಿವಮೊಗ್ಗ: ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಫೈಜಾನ್ ಶವವಾಗಿ ಪತ್ತೆ!

ಹಂಚಿಕೊಳ್ಳಿ
WhatsApp Facebook X Telegram
ಈಜಲು ತೆರಳಿದ್ದ ಯುವಕ ಸಾವು
ಈಜಲು ತೆರಳಿದ್ದ ಯುವಕ ಸಾವು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ :  ನಗರದ ತುಂಗನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟಪ್ಪನ ಕ್ಯಾಂಪ್ ಬಳಿ ನಿನ್ನೆ ತುಂಗಾ ನದಿಯಲ್ಲಿ ಈಜಲು ತೆರಳಿ ನೀರುಪಾಲಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕನನ್ನು ಫೈಜಾನ್ ಎಂದು ಗುರುತಿಸಲಾಗಿದೆ. 

ನಿನ್ನೆ ಯುವಕರ ತಂಡವೊಂದು ಪುಟ್ಟಪ್ಪನ ಕ್ಯಾಂಪ್ ಬಳಿಯ ತುಂಗಾ ನದಿ ತೀರದಲ್ಲಿ ಪಾರ್ಟಿ ಮಾಡಲು ಸೇರಿತ್ತುಎನ್ನಲಾಗಿದೆ. ಈ ವೇಳೆ ಫೈಜಾನ್ ಹಾಗೂ ಯಾಸಿನ್ ಅರಾಫತ್ (25) ಎಂಬ ಇಬ್ಬರು ಯುವಕರು ನದಿಗೆ ಈಜಲು ಇಳಿದಿದ್ದಾರೆ. ಈ ಪೈಕಿ ಯಾಸಿನ್ ಅರಾಫತ್ ಸುರಕ್ಷಿತವಾಗಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದರೆ, ಫೈಜಾನ್ ನೀರಿನ ರಭಸಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. 

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡದ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ನಿನ್ನೆ ರಾತ್ರಿ 8 ಗಂಟೆಯವರೆಗೆ ಶೋಧ ನಡೆಸಿದರೂ ಯುವಕನ ಸುಳಿವು ಸಿಗದ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಯುವಕ ನಾಪತ್ತೆಯಾಗಿರುವ ಬಗ್ಗೆ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. 

ಇಂದು ಬೆಳಿಗ್ಗೆ ಪುನಃ ಶೋಧ ಕಾರ್ಯ ಮುಂದುವರಿಸಿದ ವೇಳೆ ಫೈಜಾನ್ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದ ರಕ್ಷಣಾ ಸಿಬ್ಬಂದಿ, ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ತುಂಗನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor