ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬದವರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಬರೋಬ್ಬರಿ 799.20 ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಇದರ ಮೂಲವನ್ನು ಬಯಲಿಗೆಳೆಯಲು ಪ್ರಕರಣವನ್ನು ಸಿಬಿಐ ಅಥವಾ ಇಡಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಅಕ್ರಮದಲ್ಲಿ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸಚಿವರ ಕೈವಾಡವಿರುವ ಶಂಕೆ ಇರುವುದರಿಂದ, ರಾಜ್ಯಮಟ್ಟದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಮೇಲಾಗಿ ಅಕ್ರಮ ಹಣದ ವಹಿವಾಟು ಹೊರರಾಜ್ಯಗಳಿಗೂ ವಿಸ್ತರಿಸಿರುವುದರಿಂದ ಸಿಬಿಐ ಅಥವಾ ಇಡಿ ಸಂಸ್ಥೆಗಳೇ ತನಿಖೆ ನಡೆಸುವುದು ಸೂಕ್ತ ಎಂದರು
ಕಳೆದ ಮೂರು ವರ್ಷಗಳ ಅವಧಿಯಲ್ಲಿ 28 ಲಕ್ಷ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ತಲಾ 2,950 ವೆಚ್ಚದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ತೋರಿಸಿ 799.20 ಕೋಟಿ ಬಿಡುಗಡೆ ಮಾಡಿಕೊಳ್ಳಲಾಗಿದೆ. ಆದರೆ, ರಾಜ್ಯದಲ್ಲಿ ವಾಸ್ತವಿಕವಾಗಿ ಇಂತಹ ತಪಾಸಣೆ ನಡೆದಿದ್ದಕ್ಕೆ ಯಾವುದೇ ಖಚಿತ ದಾಖಲೆಗಳಿಲ್ಲ. ತಪಾಸಣೆಗಾಗಿ 8 ಗುತ್ತಿಗೆದಾರರಿಗೆ 81 ಕೆಲಸದ ಆದೇಶಗಳನ್ನು ನೀಡಲಾಗಿದೆಯಾದರೂ, ಪರೀಕ್ಷೆಗೊಳಪಟ್ಟ ಕಾರ್ಮಿಕರು, ತಪಾಸಣೆ ನಡೆಸಿದ ವೈದ್ಯರು, ಪ್ರಯೋಗಾಲಯಗಳು ಹಾಗೂ ಬಳಸಲಾದ ಮೆಡಿಕಲ್ ಕಿಟ್‌ಗಳ ಖರೀದಿಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿಲ್ಲ ಎಂದು ದೂರಿದ್ದಾರೆ.
ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಲ್ಲೇ ಸುಮಾರು 1 ಲಕ್ಷ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ 30 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕುಂಸಿಯಲ್ಲಿ 1,402, ಟಿಪ್ಪುನಗರದಲ್ಲಿ 1,502 ಹಾಗೂ ಹಾರನಹಳ್ಳಿಯಲ್ಲಿ 1,602 ಜನರಿಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆಯಾದರೂ, ಸ್ಥಳೀಯ ಫಲಾನುಭವಿಗಳಿಗೆ ಇದರ ಸುಳಿವೇ ಇಲ್ಲ. ನನ್ನ ಸ್ವಕ್ಷೇತ್ರ ತೀರ್ಥಹಳ್ಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಯಾವುದೇ ತಪಾಸಣಾ ಶಿಬಿರಗಳು ನಡೆದಿಲ್ಲ ಎಂಬುದನ್ನು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಖಾತರಿಪಡಿಸಿದ್ದಾರೆ ಎಂದು ಜ್ಞಾನೇಂದ್ರ ವಿವರಣೆ ನೀಡಿದ್ದಾರೆ.
