ಶಿವಮೊಗ್ಗ : ವೈಫಲ್ಯ ಮುಚ್ಚಿಹಾಕಲು SIR ರಾಜಕೀಯ: ಡಿಕೆಶಿ ಸರ್ಕಾರದ ವಿರುದ್ಧ ಈಶ್ವರಪ್ಪ  ವಾಗ್ದಾಳಿ 

ಹಂಚಿಕೊಳ್ಳಿ
WhatsApp Facebook X Telegram
ಕೆ ಎಸ್​ ಈಶ್ವರಪ್ಪ
ಕೆ ಎಸ್​ ಈಶ್ವರಪ್ಪ

ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: SIR ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 56 ಸಾವಿರ ಮತಗಳು ಡಿಲೀಟ್ ಆಗಿವೆ. ಅದರಲ್ಲಿ ಅನೇಕ ಮೃತಪಟ್ಟವರ ಹೆಸರುಗಳೂ ಇವೆ. ಸತ್ತವರನ್ನೆಲ್ಲಾ ಮತದಾರರ ಪಟ್ಟಿಯಲ್ಲಿ ಹಾಗೆಯೇ ಸೇರಿಸಿಕೊಂಡು ಕೂರಲು ಸಾಧ್ಯವೇ? ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.

ರಾಜ್ಯದಲ್ಲಿ ಎಸ್.ಐ.ಆರ್. ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಅವರು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಎಸ್.ಐ.ಆರ್. ವಿಷಯವಾಗಿ ರಾಜ್ಯದಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿರುವುದು ದುರಾದೃಷ್ಟಕರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರವಿಲ್ಲ. ಇಡೀ ರಾಜ್ಯದಲ್ಲಿ ಈ ಎಸ್.ಐ.ಆರ್. ಪ್ರಕ್ರಿಯೆಯನ್ನು ತಪ್ಪಾಗಿ ಬಳಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.

ಅನೇಕ ಜನರು ಬೇರೆ ಜಿಲ್ಲೆಗಳಿಗೆ ಅಥವಾ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ದುರಂತ.ಬೆಳಗಾವಿ ಶಾಸಕ ಅಭಯ್ ಪಾಟೀಲ್ ಅವರು ಮತದಾರರ ಹೆಸರು ಡಿಲೀಟ್ ಮಾಡಲು ಬರೆದಿರುವ ಪತ್ರದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನು ಮುಸ್ಲಿಮರ ಅಥವಾ ದಲಿತರ ಹೆಸರುಗಳನ್ನು ಕೈಬಿಡಿ ಎಂದು ಎಲ್ಲೂ ಹೇಳಿಲ್ಲ. ಯಾರು ಮತದಾರರು ನನ್ನ ಕ್ಷೇತ್ರವನ್ನು ಬಿಟ್ಟು ಬೇರೆಡೆಗೆ ಹೋಗಿದ್ದಾರೋ, ಅವರ ಹೆಸರುಗಳನ್ನು ಮಾತ್ರ ಕೈಬಿಡಲು ಹೇಳಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ವಿಫಲವಾಗುತ್ತಿದ್ದಾರೆ. ತಮ್ಮ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಈ ಎಸ್.ಐ.ಆರ್. ವಿಷಯವನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಸಾಧು-ಸಂತರ ಸಭೆಯಲ್ಲಿ ಮುಖ್ಯಮಂತ್ರಿಗಳು ನೀವೆಲ್ಲರೂ ನನ್ನ ರಾಯಭಾರಿಗಳು, ನೀವು ನನ್ನ ಸೇವೆ ಮಾಡಬೇಕು ಎಂದು ಹೇಳಿದ್ದಾರೆ. ಸ್ವಾಮೀಜಿಗಳು ಅವರ ಈ ಮಾತನ್ನು ಹೇಗೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ. ಇನ್ನೊಂದೆಡೆ ಶಾಸಕ ಬಿ.ಕೆ. ಹರಿಪ್ರಸಾದ್ ಅವರು ಆರ್.ಎಸ್.ಎಸ್. ಅನ್ನು ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆರ್.ಎಸ್.ಎಸ್. ಬ್ಯಾನ್ ಮಾಡಲು ಅವರ ಅಪ್ಪನ ಕೈಯಲ್ಲೂ ಆಗಲಿಲ್ಲ, ಅಜ್ಜನ ಕೈಯಲ್ಲೂ ಆಗಲಿಲ್ಲ. ಇನ್ನು ಇವರಿಂದ ಎಲ್ಲಿ ಸಾಧ್ಯವಾಗುತ್ತದೆ? ಈ ಎಲ್ಲಾ ವೈಫಲ್ಯ ಹಾಗೂ ಗೊಂದಲಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ನಾಯಕರು ಎಸ್.ಐ.ಆರ್. ಅನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗ ಒಂದೇ ಜಿಲ್ಲೆಯಲ್ಲೇ 56 ಸಾವಿರ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗಿವೆ. ಅದರಲ್ಲಿ ಅನೇಕ ಜನ ತೀರಿಹೋದವರಿದ್ದಾರೆ. ಮೃತರಾದವರ ಹೆಸರುಗಳನ್ನು ಕೂಡ ಡಿಲೀಟ್ ಮಾಡದೆ ಪಟ್ಟಿಯಲ್ಲಿ ಹಾಗೆಯೇ ಉಳಿಸಬೇಕಿತ್ತೇ? ಈ ರೀತಿ ಅಪಪ್ರಚಾರ ಮಾಡುತ್ತಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.ಒಂದು ವೇಳೆ ನಿಮ್ಮದೇ ಸರ್ಕಾರದ ಅವಧಿಯಲ್ಲಿ ಅರ್ಹರ ಹೆಸರುಗಳು ಪಟ್ಟಿಯಿಂದ ಬಿಟ್ಟು ಹೋಗಿದ್ದರೆ, ನೀವೇ ಆ ಹೆಸರುಗಳನ್ನು ಮರಳಿ ಸೇರಿಸಿ. ಎಸ್.ಐ.ಆರ್. ಅನ್ನು ರಾಜಕೀಯವಾಗಿ ಬಳಸಿಕೊಂಡು ಜನರಲ್ಲಿ ಸುಮ್ಮನೆ ಗೊಂದಲ ಸೃಷ್ಟಿಸಬೇಡಿ. ಸಾರ್ವಜನಿಕರ ಹೆಸರುಗಳು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿದ್ದರೆ ನಮ್ಮ ಬಳಿ ಬನ್ನಿ, ನಿಮ್ಮ ಹೆಸರುಗಳನ್ನು ಪಟ್ಟಿಗೆ ಸೇರಿಸುವ ಕೆಲಸವನ್ನು ನಾವು ಮಾಡುತ್ತೇವೆ.

ಎಸ್.ಐ.ಆರ್. ಎನ್ನುವುದು ಮತದಾರರ ಪಟ್ಟಿಯನ್ನು ಜರಡಿ ಹಿಡಿದು ಶುದ್ಧೀಕರಿಸುವ ಒಂದು ಅಸ್ತ್ರ. ಆ ಕೆಲಸವನ್ನು ಚುನಾವಣಾ ಆಯೋಗ ನಿಯಮಾನುಸಾರ ಮಾಡುತ್ತಿದೆ ಎಂದು ಹೇಳಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor