ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿರುವ ಮಲೆನಾಡಿನ ರೈತರ ಕುಂದುಕೊರತೆ ಆಲಿಸಲು ಮತ್ತು ಅವರೊಂದಿಗೆ ನೇರ ಸಂವಾದ ನಡೆಸಲು ಸಿ ಎಂ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 19ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಕಸ್ತೂರಿ ರಂಗನ್ ವರದಿಯ ಕುರಿತು ಸಮಗ್ರವಾಗಿ ಚರ್ಚಿಸಲು ಸೆಪ್ಟೆಂಬರ್ 21 ರಂದು ರಾಜ್ಯ ಸರ್ಕಾರವು ಒಂದು ದಿನದ ಪೂರ್ಣ ಪ್ರಮಾಣದ ವಿಶೇಷ ಅಧಿವೇಶನ ಕರೆದಿದೆ. ಈ ಮಹತ್ವದ ಅಧಿವೇಶನಕ್ಕೂ ಮುನ್ನ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಒಳಪಡುವ 6 ಜಿಲ್ಲೆಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ಮಾಹಿತಿ ಸಂಗ್ರಹಿಸಲು ಡಿಸಿಎಂ ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ (ಕ್ಯಾಬಿನೆಟ್) ಸಭೆ ನಡೆಯಲಿದ್ದು, ಮರುದಿನ ಅಂದರೆ ಸೆಪ್ಟೆಂಬರ್ 19 ರಂದು ಅವರು ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ.
ತೀರ್ಥಹಳ್ಳಿಯ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ರೈತರೊಂದಿಗೆ ಮುಖಾಮುಖಿ ಸಂವಾದ ಕಾರ್ಯಕ್ರಮ ನಡೆಯಲಿದ್ದು, ನಂತರ ಅನಂತ ಮೂರ್ತಿ ಪಿಯು ಕಾಲೇಜಿನ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ಜರುಗಲಿದೆ. ಈ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತೀರ್ಥಹಳ್ಳಿಯ ಕಾರ್ಯಕ್ರಮಗಳ ನಂತರ ಬಾಳೆಹೊನ್ನೂರಿಗೆ ತೆರಳಲಿರುವ ಅವರು, ಅಲ್ಲಿಯೂ ಸ್ಥಳೀಯರಿಂದ ಮಾಹಿತಿ ಹಾಗೂ ಸಲಹೆಗಳನ್ನು ಸಂಗ್ರಹಿಸಲಿದ್ದಾರೆ.ಈ ಕಾರ್ಯಕ್ರಮದ ನೇತೃತ್ವವನ್ನು ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಹಿಲಸಲಿದ್ದಾರೆ ಎಂದರು.
