ಮಲೆನಾಡು ಟುಡೆ ಸುದ್ದಿ / ಸಾಗರ / ಪೇಟೆ ತುಂಬಾ ಕಳೆದ ನಾಲ್ಕೈದು ತಿಂಗಳಿನಿಂದಲೂ ಬಾವಿ ಮುಚ್ಚಿದ ಪ್ರಕರಣದ್ದೆ ಸಮಾಚಾರ, ಅದರಲ್ಲು ಮೊನ್ನೆ ಮೊನ್ನೆ ಶಾಸಕರ ಮನೆ ಹತ್ರ ಹೋಗಿ ಮಾಜಿ ಶಾಸಕರು ಬಾವಿ ಕಂಡು ಬಂದಾಗಿನಿಂದ ವಿಷಯ ಬಾರೀ ದೊಡ್ಡದಾಗಿದೆ. ಇದೀಗ ಇದೇ ವಿಚಾರಕ್ಕೆ ಮತ್ತೆ ಸಿಟ್ಟಾಗಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಮನೆ ಪಕ್ಕದ ಬಾವಿಯನ್ನು ಮುಚ್ಚಿರುವ ವಿಚಾರದಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದು ಅಪಪ್ರಚಾರ ನಡೆಸಿ ಮಾನಹಾನಿ ಮಾಡಲಾಗಿದೆ, ಹಾಗಾಗಿ ಹರತಾಳು ಹಾಲಪ್ಪ, ನಾರಾಯಣ ಮೂರ್ತಿ ಸೇರಿದಂತೆ ಕೆಲವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಿನ್ನೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದಕ್ಕೆ ಕಾರಣವಾಗಿರುವ ಬಾವಿಗೂ ತಮಗೂ ಯಾವುದೇ ಸಂಬಂಧವಿಲ್ಲ ಮತ್ತೊಂದ್ ಸಲ ಸ್ಪಷ್ಟ ಮಾಡಿದ್ರು. ನಿವೇಶನದ ಮಾಲೀಕರೇ ಬಾವಿಯನ್ನು ಮುಚ್ಚಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೂ ತಮ್ಮ ಹೆಸರನ್ನು ಈ ವಿಚಾರದಲ್ಲಿ ಅನಗತ್ಯವಾಗಿ ಎಳೆದು ತಿಂಗಳುಗಟ್ಟಲೆ ಅಪಪ್ರಚಾರ ನಡೆಸಲಾಗ್ತಿದೆ ಅಂತಾ ದೂರಿದ್ರು.
ಇನ್ನ ಭಾವಿ ಮುಚ್ಚಿದ ವಿಚಾರ ಸಂಬಂಧ ಅಗತ್ಯ ದಾಖಲೆ ಸಂಗ್ರಹಿಸಲಾಗಿದೆ. ಆ ಸತ್ಯಾಂಶವನ್ನು ದಾಖಲೆಗಳೊಂದಿಗೆ ಮಾಧ್ಯಮಗಳ ಎದುರು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು. ಇದೇ ವಿಚಾರವಾಗಿ ಶ್ರೀ ಸ್ವಾಮಿ ವಿವೇಕಾನಂದ ಮಿತ್ರ ವೃಂದದ ಪ್ರಮುಖರಾದ ಕವಲಕೋಡು ವೆಂಕಟೇಶ, ಎಸ್.ಜಿ. ಕುಮಾರಸ್ವಾಮಿ, ಯೋಗ ಗುರು ವಿಶ್ವೇಶ್ವರ ಕೋಳಿವಾಡ ಹಾಗೂ ಪುರಸಭಾ ಮಾಜಿ ಸದಸ್ಯ ಕೆ.ಎಸ್. ವೆಂಕಟೇಶ ಅವರು ಪ್ರತಿಕ್ರಿಯಿಸಿದ್ದು, ಸಂಸ್ಥೆಯ ಸ್ವಂತ ನಿವೇಶನದಲ್ಲಿದ್ದ ಬಾವಿಯನ್ನು ಸಂಸ್ಥೆಯೇ ಮುಚ್ಚಿದೆ ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಶಾಸಕರು ಹಾಗೂ ನಗರಸಭೆಯ ವಿರುದ್ಧ ರಾಜಕೀಯ ದುರುದ್ದೇಶದಿಂದ ಮಾಧ್ಯಮಗಳ ಮೂಲಕ ಬಾವಿ ಮುಚ್ಚಿದ ಪ್ರಕರಣದ ಬಗ್ಗೆ ಆರೋಪ ಮಾಡಲಾಗುತ್ತಿದೆ. ಇದೇ ರೀತಿಯ ಆರೋಪಗಳನ್ನು ಮುಂದುವರಿಸಿದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. 1959ರಲ್ಲಿ ಆರಂಭವಾದ ಪುಸ್ತಕ ಭಂಡಾರ ಮತ್ತು ಉಚಿತ ವಾಚನಾಲಯವನ್ನು ಶಾಶ್ವತವಾಗಿ ನಡೆಸುವ ಉದ್ದೇಶದಿಂದ ಅಂದಿನ ಪುರಸಭೆಯಿಂದ ವಾರ್ಡ್ ನಂ.18ರಲ್ಲಿ ನಿವೇಶನ ಖರೀದಿಸಲಾಗಿತ್ತು. ಆ ನಿವೇಶನದಲ್ಲಿದ್ದ ಬಾವಿ ಹಲವು ವರ್ಷಗಳಿಂದ ಬಳಕೆಯಾಗದೆ ಗಿಡಗಂಟಿಗಳು ಬೆಳೆದು, ನೀರು ಕಲುಷಿತಗೊಂಡು ಕಸದ ಗುಂಡಿಯಂತಾಗಿತ್ತು ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.
ಸಮುದಾಯ ಭವನ ಹಾಗೂ ವಾಚನಾಲಯ ಕಟ್ಟಡ ನಿರ್ಮಾಣಕ್ಕೆ ಹಳೆಯ ಬಾವಿ ಅಡ್ಡಿಯಾಗುತ್ತಿದ್ದ ಕಾರಣ ಅದನ್ನು ಮುಚ್ಚಿ ನಿವೇಶನವನ್ನು ಸಮತಟ್ಟು ಮಾಡಲು ತೀರ್ಮಾನಿಸಲಾಗಿತ್ತು. ಈ ಭಾಗದ ಜನರಿಗೆ ಕುಡಿಯುವ ನೀರಿನ ಅಗತ್ಯವನ್ನು ಗಮನಿಸಿ ನಗರಸಭೆಯ ಜಾಗದಲ್ಲಿ ಹೊಸ ಬಾವಿ ಹಾಗೂ ಪಂಪ್ಸೆಟ್ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಹಳೆಯ ಬಾವಿ ಬಳಕೆಗೆ ಯೋಗ್ಯವಾಗಿರದ ಕಾರಣ ಅದನ್ನು ಮುಚ್ಚಲಾಗಿದೆ. ಈಗ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಸಿದ್ಧಪಡಿಸಿ ನಗರಸಭೆಯಿಂದ ಅನುಮತಿ ಪಡೆಯಲು ಸಂಸ್ಥೆ ಮುಂದಾಗಿದೆ ಎಂದು ಶ್ರೀ ಸ್ವಾಮಿ ವಿವೇಕಾನಂದ ಮಿತ್ರ ವೃಂದದ ಪ್ರಮುಖರು ಹೇಳಿದ್ದಾರೆ.
