ಶಿವಮೊಗ್ಗ: ಶ್ರೀ ಗುರು ಮಲ್ಲಿಕಾರ್ಜುನಾ ನಾಟ್ಯ ಸಂಘ, ಕಲ್ಲೂರು ವತಿಯಿಂದ ಆಗಸ್ಟ್ 21 ರಂದು ವಿದ್ಯಾನಗರದ ಹಳೆ ರೈಲ್ವೇ ಸ್ಟೇಷನ್ ಎದುರುಗಡೆ ಬಂದರ ನೋಡ ಬಂಗಾರಿ ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಟ್ಯ ಸಂಘದ ಅಧ್ಯಕ್ಷರಾದ ಮಂಟೇಶ ಬಿ. ದಂಡಿನ ಮಾತನಾಡಿ,ಬಂದರೆ ನೋಡ ಬಂಗಾರಿ ಎಂಬುದು ಸಂಪೂರ್ಣ ಹಾಸ್ಯಭರಿತ ನಾಟಕವಾಗಿದೆ. ಬರಿ ಹಾಸ್ಯ ಮಾತ್ರವಲ್ಲದೆ, ಈ ನಾಟಕದ ಮೂಲಕ ರೈತರ ಕುರಿತು ಸಮಾಜಕ್ಕೆ ಉತ್ತಮ ಸಂದೇಶವನ್ನೂ ನೀಡುತ್ತಿದ್ದೇವೆ. ಯಾವುದೇ ಅಶ್ಲೀಲ ಪದಗಳನ್ನು ಬಳಸದಿರುವುದರಿಂದ ಕುಟುಂಬ ಸಮೇತರಾಗಿ ಯಾವುದೇ ಮುಜುಗರವಿಲ್ಲದೇ ಎಲ್ಲರೂ ಬಂದು ನಾಟಕ ವೀಕ್ಷಿಸಬಹುದು. ಪ್ರದರ್ಶನಕ್ಕೆ 150 ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ, ಎಂದರು.
ಅಲ್ಲದೆ, ಆಗಸ್ಟ್ 21 ರಂದು ಒಟ್ಟು 2 ಪ್ರದರ್ಶನಗಳಿರಲಿದ್ದು, ಮೊದಲ ಪ್ರದರ್ಶನ ಮಧ್ಯಾಹ್ನ 2:30 ರಿಂದ ಸಂಜೆ 6:15 ರವರೆಗೆ ನಡೆಯಲಿದೆ. ಎರಡನೇ ಪ್ರದರ್ಶನ ಸಂಜೆ 6:15 ರಿಂದ ರಾತ್ರಿ 9:30 ರವರೆಗೆ ನಡೆಯಲಿದೆ. ಸಾರ್ವಜನಿಕರೆಲ್ಲರೂ ಆಗಮಿಸಿ ನಾಟಕ ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು, ಎಂದು ಕೋರಿದರು.
ಇನ್ನು ನಾಟಕದಲ್ಲಿ ಬಂಗಾರಿ ಪಾತ್ರದಲ್ಲಿ ನಟಿಸುತ್ತಿರುವ ರಿತಿಕಾ ಮಾತನಾಡಿ, ನಾನು ಈ ಹಿಂದೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದು, ಪ್ರಸ್ತುತ ಈ ನಾಟಕದಲ್ಲಿ ಬಂಗಾರಿ ಎಂಬ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದೇನೆ. ಸುಮಾರು 30 ಕಲಾವಿದರು ಈ ನಾಟಕದಲ್ಲಿದ್ದು, ಇದುವರೆಗೆ ರಾಜ್ಯದಾದ್ಯಂತ 5 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯುವ ಈ ನಾಟಕ ನಿಮ್ಮನ್ನು ನಗೆಗಡಲಿನಲ್ಲಿ ತೇಲಿಸಲಿದ್ದು, ಎಲ್ಲರೂ ಬಂದು ನೋಡಿ ಪ್ರೋತ್ಸಾಹಿಸಿ, ಎಂದು ವಿನಂತಿಸಿದರು.
