ಶಿವಮೊಗ್ಗ : ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎನ್ನುವ ಸ್ಪಷ್ಟ ನಿಲುವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ವಿಷಯದಲ್ಲಿ ಮುಂದಿನ ಹಂತದ ನಿರ್ಧಾರವನ್ನು ಮುಖ್ಯಮಂತ್ರಿಗಳ ಜತೆ ಸುದೀರ್ಘವಾಗಿ ಚರ್ಚಿಸಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಭರವಸೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಈಗಾಗಲೇ ತಮಿಳುನಾಡು ವಿಧಾನಸಭೆಯಲ್ಲಿ ವಿಶೇಷ ನಿರ್ಣಯ ಮಂಡನೆ ಮಾಡಲಾಗಿದೆ. ಪರೀಕ್ಷೆಗಳ ನೆಪದಲ್ಲಿ ಮಕ್ಕಳ ಮೇಲೆ ಯಾವುದೇ ರೀತಿಯ ಮಾನಸಿಕ ಅಥವಾ ಶೈಕ್ಷಣಿಕ ಶೋಷಣೆ ನಡೆಯಬಾರದು. ಕೇವಲ ಪರೀಕ್ಷೆಯ ವೈಫಲ್ಯದಿಂದ ಮಕ್ಕಳ ಭವಿಷ್ಯವೇ ಹಾಳಾಗಬಾರದು ಎಂಬ ದೃಷ್ಟಿಯಿಂದ ನಾವು ರಾಜ್ಯದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಹಂತದಲ್ಲಿ ಮೂರು ಪರೀಕ್ಷಾ ವ್ಯವಸ್ಥೆಯನ್ನು (Exam 1, 2, 3) ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದು ಯಾರದ್ದೋ ವೈಯಕ್ತಿಕ ಹಿತಾಸಕ್ತಿಗಲ್ಲ, ಬದಲಿಗೆ ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದೇ ನಮ್ಮ ಆಶಯ ಎಂದು ತಿಳಿಸಿದರು.
ಈ ಹಿಂದೆ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಕರ್ನಾಟಕ ಸಿಇಟಿ (KCET) ಪ್ರವೇಶ ಪರೀಕ್ಷಾ ವ್ಯವಸ್ಥೆಯು ಅತ್ಯಂತ ಪಾರದರ್ಶಕ ಹಾಗೂ ಮಾದರಿಯಾಗಿತ್ತು. ಆದರೆ ಕೇಂದ್ರ ಸರ್ಕಾರವು ಇಡೀ ದೇಶಕ್ಕೆ ಏಕರೂಪದ ಪರೀಕ್ಷೆ ಎಂಬ ಹೆಸರಿನಲ್ಲಿ ನೀಟ್ ಜಾರಿಗೆ ತಂದಿತು. ಇದರಿಂದ ರಾಜಸ್ಥಾನ ಹಾಗೂ ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಬೃಹತ್ ಅಕ್ರಮಗಳು ನಡೆದವು. ವರ್ಷವಿಡೀ ಹಗಲಿರುಳು ಶ್ರಮಪಟ್ಟು ಅಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರಸ್ತೆಗೆ ಬಂತು. ಇಂತಹ ಕೆಟ್ಟ ಪರೀಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
NEET ರಾಜ್ಯದಲ್ಲಿ ನೀಟ್ ನಿಷೇಧಿಸುವ ಕುರಿತು ಶೀಘ್ರದಲ್ಲೇ ಸಿಎಂ ಜತೆ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳು ಸಹ ನೀಟ್ ರದ್ದಾಗಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ, ಇದು ನಮ್ಮ ಪಕ್ಷದ ಅಧಿಕೃತ ನಿಲುವು ಕೂಡ ಹೌದು. ಮುಂದಿನ ಶಾಸನಸಭೆಯ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವ ಬಗ್ಗೆ ಮೊದಲ ಹಂತದಲ್ಲಿ ಚರ್ಚೆ ನಡೆಸಲಾಗುವುದು ಎಂದರು.
