ಮಲೆನಾಡಿನಲ್ಲಿ ಮಳೆರಾಯ ಮಂದಾರ ಗೀತೆ! 4 ದಿನಗಳಲ್ಲಿ ಎಷ್ಟು ಮಳೆಯಾಯ್ತು! ಡ್ಯಾಮ್​ನಲ್ಲಿ ಎಷ್ಟೆಕ್ಕೇರಿತು ನೀರಿನ ಪ್ರಮಾಣ ತಿಳಿಯಿರಿ

ಹಂಚಿಕೊಳ್ಳಿ
WhatsApp Facebook X Telegram
Shivamogga Rainfall Analysis

Shivamogga Rainfall Analysis / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬರದ ಬೇಗೆಯ ಆತಂಕ ನಿವಾರಿಸಿದ್ದ ಆಗಸ್ಟ್ ತಿಂಗಳ ಮಳೆ ಅಬ್ಬರದಲ್ಲಿ ಈಗ ಮಂದ್ರ ಸ್ಥಾಯಿ.. ಆರಂಭದಲ್ಲಿ ಬಿರುಸು ಪಡೆದುಕೊಂಡಿದ್ದ ಮಳೆಯ ಅಬ್ಬರ ಕಳೆದ 24 ಗಂಟೆಗಳಲ್ಲಿ ಮಲೆನಾಡು ಭಾಗದಲ್ಲಿ ಗಣನೀಯವಾಗಿ ತಗ್ಗಿದೆ.ಸಿಟಿಯಲ್ಲಿ ಮಾತ್ರ ಬೆಳಗ್ಗೆಯಿಂದಲೂ ಅರುಣನ ದರ್ಶನವಾಗಿಲ್ಲ. ಮುಸುಕಿದ ಮೋಡದ ಜಾಲರಿಯಿಂದ ಮಂದಸ್ಮೀತವಾದ ವರ್ಷಧಾರೆಯಾಗುತ್ತಿದೆ. ಒಂಚೂರು ಥಂಡಿ ಹಿಡಿದು, ಜನರ ನಡುವೆ ಸುರ್​ ಸುರ್​ ಎನ್ನುತ್ತಾ ಶೀತಮೂಗಿನ ಸಂಗೀತ ಸ್ವರ ಕೇಳುತ್ತಿದೆ.

ಇರಲಿ ವರ್ಷಧಾರೆಯ ಹೊಗಳಿಕೆ ಪದಗಳ ಸಾಹಿತ್ಯದ ನಡುವೆ ಮಳೆಯ ಲೆಕ್ಕಾಚಾರ ಗಮನಿಸುವುದಾಧರೆ, ಈ ತಿಂಗಳ ಮೊದಲ ಎರಡು ದಿನ ಸುರಿದ ಧಾರಾಕಾರ ಮಳೆಯಾಗಿತ್ತು. ಪರಿಣಾಮ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ.

ಇನ್ನೂ ಆಗಸ್ಟ್ ನ ಮೊದಲ ನಾಲ್ಕು ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 157.20 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಆಗಸ್ಟ್ 1ರಂದು 46.90 ಮಿಲಿಮೀಟರ್ ಹಾಗೂ ಆಗಸ್ಟ್ 2ರಂದು 74.21 ಮಿಲಿಮೀಟರ್ ಭಾರಿ ಮಳೆ ಸುರಿದಿತ್ತು. ಆದರೆ, ಆ ನಂತರ ಮಳೆ ಪ್ರಮಾಣ ಕ್ಷೀಣಿಸಿದ್ದು, ಆಗಸ್ಟ್ 4ರಂದು ಬೆಳಗಿನ ಲೆಕ್ಕದಲ್ಲಿ ಸಿಕ್ಕ ಮಾಹಿತಿ ಪ್ರಕಾರ, 19.54 ಮಿಲಿಮೀಟರ್ ಹಾಗೂ ಕಳೆದ 24 ಗಂಟೆಗಳಲ್ಲಿ ಕೇವಲ 16.54 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಸಾಗರದಲ್ಲಿ ಗರಿಷ್ಠ 36.10 ಮಿಲಿಮೀಟರ್ ಹಾಗೂ ತೀರ್ಥಹಳ್ಳಿಯಲ್ಲಿ 30.80 ಮಿಲಿಮೀಟರ್ ಮಳೆಯಾಗಿದ್ದು, ಉಳಿದೆಡೆ ಮಳೆ ಪ್ರಮಾಣ ವಿರಳವಾಗಿದೆ.

ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದ ಒಳಹರಿವು ನಿನ್ನೆಯ 59203 ಕ್ಯೂಸೆಕ್‌ನಿಂದ ಇಂದು 27952 ಕ್ಯೂಸೆಕ್‌ಗೆ ಕುಸಿದಿದೆ. ಜಲಾಶಯದ ನೀರಿನ ಮಟ್ಟ ಕಳೆದ 24 ಗಂಟೆಗಳಲ್ಲಿ 1.20 ಅಡಿಗಳಷ್ಟು ಏರಿಕೆ ಕಂಡು, 1819 ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ 1785.90 ಅಡಿಗೆ ತಲುಪಿದೆ. ಪ್ರಸ್ತುತ 65.11 ಟಿಎಂಸಿ ನೀರು ಸಂಗ್ರಹವಿದೆ.

ಲಕ್ಕವಳ್ಳಿ ಭದ್ರಾ ಜಲಾಶಯದ ಒಳಹರಿವು ಸಹ ನಿನ್ನೆಯ 36103 ಕ್ಯೂಸೆಕ್‌ನಿಂದ 14451 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಭದ್ರಾದಲ್ಲಿ ಇಂದಿನ ಜಲಮಟ್ಟ 164 ಅಡಿ 9 ಇಂಚು ದಾಖಲಾಗಿದ್ದು, 47.482 ಟಿಎಂಸಿ ನೀರು ಲಭ್ಯವಿದೆ.

ಗಾಜನೂರಿನ ತುಂಗಾ ಜಲಾಶಯಕ್ಕೆ 59607 ಕ್ಯೂಸೆಕ್ ಒಳಹರಿವು ಇದ್ದು, 50753 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ವಾರಾಹಿ ಯೋಜನೆಯ ವ್ಯಾಪ್ತಿಯ ಹುಲಿಕಲ್‌ನಲ್ಲಿ 149, ಮಾಣಿಯಲ್ಲಿ 126 ಹಾಗೂ ಮಾಸ್ತಿಕಟ್ಟೆಯಲ್ಲಿ 107 ಮಿಲಿಮೀಟರ್ ಮಳೆಯಾಗಿದೆ. 594.36 ಮೀಟರ್ ಗರಿಷ್ಠ ಮಟ್ಟದ ಮಾಣಿ ಜಲಾಶಯದಲ್ಲಿ 583.29 ಮೀಟರ್ ನೀರಿದ್ದು, 7122 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor