Hulikal Ghat Works in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹುಲಿಕಲ್ ಘಾಟ್ಗೆ ನಿನ್ನೆ ಸಚಿವ ಸತೀಶ್ ಜಾರಕಿ ಹೊಳಿ ಭೇಟಿಕೊಟ್ಟಿದ್ದರು. ಘಾಟಿಯಲ್ಲಿ ಕೈಗೊಳ್ಳಲಾದ ರೂಪಾಯಿ4.35 ಕೋಟಿ ಮತ್ತು 1 ಕೋಟಿ ವೆಚ್ಚದಲ್ಲಿ ತಡೆಗೋಡೆ ಮತ್ತು ಇತರೆ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಅವರು ಪರಿಶೀಲಿಸಿದ್ರು. ಈ ವೇಳೆ ಅಧಿಕಾರಿಗಳಿಗೆ ಗುಣಮಟ್ಟದಿಂದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ರು.
ನಿನ್ನೆ ಮಂಗಳವಾರ ಸಂಜೆ ಹುಲಿಕಲ್ ಘಾಟ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಪ್ರಗತಿಯಲ್ಲಿರುವ ರಿಟೇನಿಂಗ್ ವಾಲ್ (ರಕ್ಷಣಾ ಗೋಡೆ) ನಿರ್ಮಾಣ ಹಾಗೂ ಇತರೆ ರಸ್ತೆ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಾ ಘಾಟಿಯಲ್ಲಿ ಭಾರೀ ಪ್ರಮಾಣದ ವಾಹನ ಬಿಟ್ಟು ಬೇರೆ ಲಘು ವಾಹನಗಳ ಪ್ರಯಾಣಕ್ಕೆ ಈಗಾಗಲೇ ಅವಕಾಶ ಮಾಡಿಕೊಡಲಾಗಿದೆ. ಇಲಾಖೆಯಡಿ ಸ್ಥಗಿತಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲು ಸೂಚಿಸಿದ್ದೇನೆ ಎಂದರು.
ಇದೇ ವೇಳೆ ಶಿವಮೊಗ್ಗದ ತುಂಗಾ ಸೇತುವೆ ನಿರ್ಮಾಣಕ್ಕೆ ರೂ. 50 ಕೋಟಿ ಮಂಜೂರಾಗಿದ್ದು, ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸದರಿ ಕಾಮಗಾರಿ ಆರಂಭಿಸಲಾಗುವುದು ಎಂದರು
ಮಳೆಗಾಲದ ಹಿನ್ನೆಲೆಯಲ್ಲಿ ಘಾಟಿ ಪ್ರದೇಶದಲ್ಲಿ ಭೂಕುಸಿತವಾಗದಂತೆ ತಡೆಯಲು ಮತ್ತು ವಾಹನ ಸವಾರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು, ಅಲ್ಲಿದ್ದ ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರಿಗೆ ಘಾಟಿ ರಸ್ತೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದರಿಂದ, ರಿಟೇನಿಂಗ್ ವಾಲ್ ನಿರ್ಮಾಣದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗಬಾರದು ಎಂದು ಸೂಚನೆ ನೀಡಿದರು.
ಮಳೆಗಾಲದಲ್ಲಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಯಾವುದೇ ವ್ಯತ್ಯಯ ಉಂಟಾಗದಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಫಲಕಗಳು ಹಾಗೂ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಕಾಣಿಸುವಂತಹ ಸೂಚಕಗಳನ್ನು ಅಳವಡಿಸಬೇಕು.
ಘಾಟಿ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆ ನಮಗೆ ಅತ್ಯಂತ ಪ್ರಮುಖವಾಗಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಮತ್ತು ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಗಣೇಶ್, ಅಧೀಕ್ಷಕ ಅಭಿಯಂತರ ರಾದ ರಮ್ಯ ಕಾರ್ಯಪಾಲಕ ಇಂಜಿನಿಯರ್ ಸುನಿಲ್ ಕುಮಾರ್ ಮತ್ತು ಪ್ರಕಾಶ್ , ಹೊಸನಗರ ತಹಶೀಲ್ದಾರ್, ಅಧಿಕಾರಿಗಳು, ಇಂಜಿನಿಯರ್ಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
