Rainfall Recorded Across Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಳೆ ಬರಲಿಲ್ಲ, ಬರಲಿಲ್ಲ ಅಂತಿರುವಾಗಲೇ ನಿನ್ನೆ ದಿನ ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ. ಆರಿದ್ರ ಇಲ್ಲದೆ ದಾರಿದ್ರ್ಯ ಬರುತ್ತೇನೋ ಎಂದುಕೊಂಡವರೆಲ್ಲಾ , ಈಗ ಮಳೆಗಾಲ ಕಂಡಂಗಾಯ್ತು ಎನ್ನುತ್ತಿದ್ದಾರೆ.
ಹೌದು, ಶಿವಮೊಗ್ಗದಲ್ಲಿ ನಿನ್ನೆ ಯಿಂದ ಚೂರು ಜೋರು ಮಳೆಯಾಗುತ್ತಿದೆ. ರೋಹಿಣಿ ,ಮೃಗಶಿರ ಮಳೆ ಕೈಕೊಟ್ಟಿತ್ತು. ಆರಿದ್ರ್ಯ ಇದೀಗ ತನ್ನ ವೈಭೋಗ ತೋರಿಸುತ್ತಿದೆ. ನಿನ್ನೆ ದಿನ ಸಿಟಿಯಲ್ಲಿ ಸಂಜೆ ಹೊತ್ತಿಗೆ ಕಾಮನಬಿಲ್ಲೊಂದು ಮೂಡಿತ್ತು! ಆನಂತರದಿಂದ ಮಳೆಯು ನಿರಂತರವಾಗಿ ಸುರಿಯುತ್ತಿದೆ. ಶಿವಮೊಗ್ಗವಷ್ಟೆ ಅಲ್ಲದೆ ತೀರ್ಥಹಳ್ಳಿ, ಹೊಸನಗರ, ಸೊರಬ, ಸಾಗರ, ಶಿಕಾರಿಪುರ, ಆನಂದಪುರಂ, ಬ್ಯಾಕೋಡು, ರಿಪ್ಪನ್ ಪೇಟೆ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.
ಇನ್ನೂ ಮುಂಗಾರು ಹವಾಮಾನದ ಮುನ್ಸೂಚನೆಯನ್ನು ಗಮನಿಸುವುದಾದರೆ, ಶೇಕಡಾ -46 ರಷ್ಟು ಮಳೆ ಕೊರತೆಯ ನಡುವೆಯೇ , ನಿಧಾನವಾಗಿ ಮುಂಗಾರು ಆವರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 30mm ನಿಂದ 100mm ವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆಯಂತೆ.
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 20mm ನಿಂದ 60mm ವರೆಗೆ ವ್ಯಾಪಕ ಮಳೆಯಾಗಲಿದ್ದು, ಕೆಲವು ಕಡೆಗಳಲ್ಲಿ 80mm ಗಿಂತ ಹೆಚ್ಚಿನ ಮಳೆ ದಾಖಲಾಗಬಹುದು ಎನ್ನಲಾಗಿದೆ ಹಾವೇರಿ, ಧಾರವಾಡ, ಬಿದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ 5mm ನಿಂದ 25mm ವರೆಗೆ ಹಗುರ ಮಳೆಯಾಗುವ ಸಾಧ್ಯತೆಗಳಿದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಚದುರಿದಂತೆ ಹಗುರವಾದ ಮಳೆ ಸುರಿಯಲಿದೆ
Rainfall Recorded Across Shivamogga
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಇಂದು ಮುಂಜಾನೆ 6.30 ರವರೆಗಿನ ಮಳೆ ದಾಖಲಾತಿಯ ಪ್ರಕಾರ, ಗರಿಷ್ಠ ಪ್ರಮಾಣದಲ್ಲಿ 156.5mm ಹಾಗೂ ಕನಿಷ್ಠ ಪ್ರಮಾಣದಲ್ಲಿ 72.5mm ಮಳೆ ದಾಖಲಾಗಿದ್ದು, ಸರಾಸರಿ ಮಳೆಯ ಪ್ರಮಾಣವು 97.59mm ನಷ್ಟಿದೆ.
ಈ ಪೈಕಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಗರಿಷ್ಠ 142.6mm ನಷ್ಟು ಅತ್ಯಧಿಕ ಮಳೆ ಸುರಿದಿದೆ. ತೀರ್ಥಹಳ್ಳಿಯ ಹೊಸಹಳ್ಳಿಯಲ್ಲಿ 77.0mm, ಹೊನ್ನೆತಾಳು ಭಾಗದಲ್ಲಿ 67.5mm, ಹಾದಿಗಲ್ಲು ಪ್ರದೇಶದಲ್ಲಿ 60.0mm ಹಾಗೂ ಬಿದರಗೋಡು ವ್ಯಾಪ್ತಿಯಲ್ಲಿ 55.5mm ಮತ್ತು ಡೆಮ್ಲಾಪುರದಲ್ಲಿ 51.5mm ಮಳೆ ದಾಖಲಾಗಿದೆ.
ಹೊಸನಗರ ತಾಲೂಕಿನ ಮೇಲಿನಬೆಸಿಗೆಯಲ್ಲಿ 82.5mm, ಹೊಸನಗರ ಪಟ್ಟಣದಲ್ಲಿ 75.6mm, ಮುಂಬಾರು ಭಾಗದಲ್ಲಿ 75.0mm ಹಾಗೂ ಕೋಡೂರು ವ್ಯಾಪ್ತಿಯಲ್ಲಿ 62.0mm ಮಳೆಯಾಗಿದೆ.
ಇನ್ನು ಸಾಗರ ತಾಲೂಕಿನ ಕಂಡಿಕಾದಲ್ಲಿ 74.0mm, ಕಲ್ಮನೆಯಲ್ಲಿ 62.0mm, ಹಿರೇನೆಲ್ಲೂರು ಭಾಗದಲ್ಲಿ 57.0mm, ಕೋಲೂರು ವ್ಯಾಪ್ತಿಯಲ್ಲಿ 56.5mm ಹಾಗೂ ಸಾಗರ ನಗರ ಪ್ರದೇಶದಲ್ಲಿ 55.2mm ಮತ್ತು ಕೆಳದಿಯಲ್ಲಿ 52.0mm ಮಳೆ ಸುರಿದಿದೆ. ಸೊರಬ ತಾಲೂಕಿನ ಹೊಸಬಾಳೆಯಲ್ಲಿ 60.0mm ಹಾಗೂ ಹೆಚೆ ಗ್ರಾಮದಲ್ಲಿ 49.5mm ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಒಟ್ಟಾರೆ ವರುಣ ಕೊನೆಗೂ ಕೃಪೆ ತೋರಿದ್ದು, ಮಲೆನಾಡಲ್ಲಿ ಮುಂಗಾರಿನ ಚಟುವಟಿಕೆ ಆರಂಭಗೊಂಡಿದೆ, ಈ ವಾರವಿಡಿ ಮಳೆ ಹೀಗೆ ಮುಂದುವರಿದರೆ, ಮಳೆ ಹಬ್ಬದ ಪ್ರವಾಸಗಳು ಜೋರಾಗಲಿದೆ.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz




