ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮ ಮತ್ತು ಜಾಗೃತಿಯೊಂದಿಗೆ ಆಚರಿಸಲಾಗುತ್ತದೆ. ಯೋಗವು ಭಾರತದ ಪುರಾತನ ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಕೊಡುಗೆ. ಇದು ಕೇವಲ ದೈಹಿಕ ವ್ಯಾಯಾಮವಲ್ಲ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಧಿಸುವ ಸಮಗ್ರ ಜೀವನ ವಿಧಾನವಾಗಿದೆ. 2026ರ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯ “Yoga for Healthy Aging” ಅಂದರೆ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬುದು ಇಂದಿನ ಸಮಾಜದ ಅಗತ್ಯತೆಗೆ ತಕ್ಕಂತೆ ಅತ್ಯಂತ ಮಹತ್ವಪೂರ್ಣ ವಿಷಯವಾಗಿದೆ.
ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ವೃದ್ಧಾಪ್ಯವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ವೃದ್ಧಾಪ್ಯ ಎಂದರೇನು?-ವೃದ್ಧಾಪ್ಯವು ಮಾನವನ ಜೀವನದ ಸಹಜ ಹಂತವಾಗಿದೆ. ವಯಸ್ಸು ಹೆಚ್ಚಾಗುತ್ತಾ ಹೋದಂತೆ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ದೇಹದ ಲವಚಿಕತೆ ಕಡಿಮೆಯಾಗುವುದು, ದೈಹಿಕ ಶಕ್ತಿ ಕಡಿಮೆಯಾಗುವುದು, ಸಂಧಿ ನೋವು, ನಿದ್ರಾಹೀನತೆ, ಒತ್ತಡ ಮತ್ತು ವಿವಿಧ ಜೀವನಶೈಲಿ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ವೃದ್ಧಾಪ್ಯವೆಂದರೆ ಕೇವಲ ಹೆಚ್ಚು ವರ್ಷ ಬದುಕುವುದಲ್ಲ ಆರೋಗ್ಯಕರವಾಗಿ, ಸ್ವಾವಲಂಬಿಯಾಗಿ ಮತ್ತು ಸಂತೋಷದಿಂದ ಬದುಕುವುದಾಗಿದೆ. ಈ ನಿಟ್ಟಿನಲ್ಲಿ ಯೋಗವು ಆರೋಗ್ಯಕರ ವೃದ್ಧಾಪ್ಯವನ್ನು ಸಾಧಿಸಲು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.
ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಪರಂಪರೆಯಾಗಿದ್ದು ಆರೋಗ್ಯಕರ ಜೀವನಕ್ಕೆ ದಾರಿ ದೀಪವಾಗಿದೆ. ಯೋಗಾಭ್ಯಾಸದಲ್ಲಿ ಆಸನಗಳು, ಪ್ರಾಣಾಯಾಮ, ಧ್ಯಾನ ಮತ್ತು ವಿಶ್ರಾಂತಿ ತಂತ್ರಗಳು ಸೇರಿವೆ. ನಿಯಮಿತ ಯೋಗಾಭ್ಯಾಸವು ದೇಹದ ಸಮತೋಲನ, ಸ್ನಾಯು ಬಲ ಮತ್ತು ಲವಚಿಕತೆಯನ್ನು ಹೆಚ್ಚಿಸಲು ಸಹಕಾರಿ. ತಾಡಾಸನ, ವೃಕ್ಷಾಸನ, ಭುಜಂಗಾಸನ ಮತ್ತು ವಜ್ರಾಸನದಂತಹ ಸರಳ ಆಸನಗಳು ದೇಹದ ಚುರುಕುತನವನ್ನು ಕಾಪಾಡಲು ಸಹಾಯ ಮಾಡುತ್ತವೆ. ಜೊತೆಗೆ ರಕ್ತಸಂಚಾರ ಸುಧಾರಿಸಿ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ ಹಾಗೂ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನೂ ಉತ್ತಮಗೊಳಿಸುತ್ತವೆ.
ಆರೋಗ್ಯಕರ ವೃದ್ಧಾಪ್ಯದಲ್ಲಿ ಯೋಗದ ಮಹತ್ವ-ದೈಹಿಕ ಆರೋಗ್ಯ ಸುಧಾರಣೆ-ಯೋಗವು ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಲವಚಿಕತೆ(Flexiblity)ಯನ್ನು ಹೆಚ್ಚಿಸುತ್ತದೆ. ಹಿರಿಯ ನಾಗರಿಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಬೆನ್ನುನೋವು, ಕುತ್ತಿಗೆ ನೋವು, ಸಂಧಿವಾತ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉದಾಹರಣೆಗೆ -ತಾಡಾಸನ (ದೇಹದ ಸಮತೋಲನ ಹೆಚ್ಚಿಸುತ್ತದೆ), ವೃಕ್ಷಾಸನ (ಏಕಾಗ್ರತೆ ಮತ್ತು ಕಾಲುಗಳ ಬಲ ಹೆಚ್ಚಿಸುತ್ತದೆ), ಭುಜಂಗಾಸನ(ಬೆನ್ನುಹುರಿಯನ್ನು ಬಲಪಡಿಸುತ್ತದೆ) ವಜ್ರಾಸನ(ಜೀರ್ಣಕ್ರಿಯೆ ಸುಧಾರಿಸುತ್ತದೆ)
Whatsapp / https://chat.whatsapp.com/JrsZ8He4nN600n0r3tJItz
ಮಾನಸಿಕ ಆರೋಗ್ಯವು ವೃದ್ಧಾಪ್ಯದಲ್ಲಿ ಅತ್ಯಂತ ಮುಖ್ಯವಾದ ಅಂಶವಾಗಿದೆ. ಅನೇಕ ಹಿರಿಯರು ಏಕಾಂತ, ಆತಂಕ ಮತ್ತು ಖಿನ್ನತೆ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಯೋಗ ಮತ್ತು ಧ್ಯಾನ ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತವೆ. ಅನುಲೋಮ ವಿಲೋಮ ಮತ್ತು ಭ್ರಮರಿ ಪ್ರಾಣಾಯಾಮಗಳು ಉಸಿರಾಟ ವ್ಯವಸ್ಥೆಯನ್ನು ಬಲಪಡಿಸಿ ಮನಸ್ಸಿಗೆ ನೆಮ್ಮದಿಯನ್ನು ಒದಗಿಸುತ್ತವೆ. ಧ್ಯಾನದಿಂದ ಏಕಾಗ್ರತೆ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ. ಇದಲ್ಲದೆ, ಯೋಗವು ಉತ್ತಮ ನಿದ್ರೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ ಸೋಂಕುಗಳ ವಿರುದ್ಧ ರಕ್ಷಣೆ ನೀಡಲು ಮತ್ತು ದೈಹಿಕ ಚೈತನ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಶವಾಸನದಂತಹ ವಿಶ್ರಾಂತಿ ಆಸನಗಳು ದೇಹದ ಆಯಾಸವನ್ನು ನಿವಾರಿಸಿ ಉತ್ತಮ ನಿದ್ರೆಗೆ ನೆರವಾಗುತ್ತವೆ.
ನಿಯಮಿತ ಯೋಗಾಭ್ಯಾಸವು ಮಧುಮೇಹ ನಿಯಂತ್ರಣಕ್ಕೆ, ರಕ್ತದೊತ್ತಡ ಕಡಿಮೆ ಮಾಡಲು, ಹೃದಯ ಆರೋಗ್ಯ ಸುಧಾರಿಸಲು, ಸ್ಥೂಲಕಾಯ ಮುಂತಾದ ದೀರ್ಘಕಾಲೀನ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಹಾಗೆಯೇ ವಯಸ್ಸಾದಂತೆ ಬೀಳುವ ಅಪಾಯ ಹೆಚ್ಚಾಗುತ್ತದೆ. ಯೋಗದ ಕೆಲವು ಆಸನಗಳು ದೇಹದ ಸಮತೋಲನವನ್ನು ಹೆಚ್ಚಿಸಿ ಚಲನೆ ಸುಲಭಗೊಳಿಸುತ್ತವೆ.
ಆಯುರ್ವೇದ ಮತ್ತು ಯೋಗ – ಆರೋಗ್ಯಕರ ವೃದ್ಧಾಪ್ಯದ ಜೋಡಿ /Yoga for Healthy Aging
ಆಯುರ್ವೇದದ ಪ್ರಕಾರ ವೃದ್ಧಾಪ್ಯದಲ್ಲಿ ವಾತದೋಷ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಒಣತನ, ನೋವು, ನಿದ್ರಾಹೀನತೆ, ದೌರ್ಬಲ್ಯ ಕಾಣಿಸಬಹುದು. ಯೋಗ ಮತ್ತು ಪ್ರಾಣಾಯಾಮವು ವಾತದೋಷವನ್ನು ಸಮತೋಲನಗೊಳಿಸಿ ದೇಹ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತದೆ.ಆರೋಗ್ಯಕರ ವೃದ್ಧಾಪ್ಯವೆಂದರೆ ವಯಸ್ಸನ್ನು ತಡೆಯುವುದು ಅಲ್ಲ, ಬದಲಾಗಿ ಅದನ್ನು ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಸ್ವೀಕರಿಸುವುದಾಗಿದೆ. ಯೋಗವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯವನ್ನು ಕಾಪಾಡುವ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿದಿನ ಸ್ವಲ್ಪ ಸಮಯ ಯೋಗಾಭ್ಯಾಸಕ್ಕೆ ಮೀಸಲಿಟ್ಟರೆ ವೃದ್ಧಾಪ್ಯದಲ್ಲಿಯೂ ಆರೋಗ್ಯಕರ, ಚುರುಕು ಮತ್ತು ಸ್ವತಂತ್ರ ಜೀವನ ನಡೆಸಬಹುದು
ಯೋಗದೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಅವುಗಳೆಂದರೆ ಸಾತ್ವಿಕ ಮತ್ತು ಪೌಷ್ಟಿಕ ಆಹಾರ, ಸಮಯಕ್ಕೆ ಸರಿಯಾಗಿ ನಿದ್ರೆ, ದಿನನಿತ್ಯ ನಡೆಯುವ ಅಭ್ಯಾಸ, ಧನಾತ್ಮಕ ಚಿಂತನೆ, ಮೊಬೈಲ್ ಮತ್ತು ಒತ್ತಡದ ಬಳಕೆ ಕಡಿಮೆ ಮಾಡುವುದು ಸಮಾಜದಲ್ಲಿ ಯೋಗದ ಅಗತ್ಯತೆ-ಇಂದಿನ ದಿನಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಅವರಿಗೆ ಆರೋಗ್ಯಕರ ಮತ್ತು ಸಂತೋಷಕರ ಜೀವನ ನೀಡಲು ಯೋಗವನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಯೋಗ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು.
Whatsapp / https://chat.whatsapp.com/JrsZ8He4nN600n0r3tJItz
2026ರ ಅಂತರಾಷ್ಟ್ರೀಯ ಯೋಗ ದಿನದ ಥೀಮ್ “Yoga for Healthy Aging” ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ – “ವೃದ್ಧಾಪ್ಯವೆಂದು ಭಯಪಡಬೇಡಿ ಆರೋಗ್ಯಕರವಾಗಿ ಸ್ವಾಗತಿಸಿ.” ಯೋಗವು ಕೇವಲ ವ್ಯಾಯಾಮವಲ್ಲ; ಅದು ಆರೋಗ್ಯ, ಶಾಂತಿ ಮತ್ತು ಸಂತೋಷದ ಜೀವನದ ಗುಟ್ಟು. ಪ್ರತಿದಿನ ಸ್ವಲ್ಪ ಸಮಯ ಯೋಗಕ್ಕೆ ಮೀಸಲಿಟ್ಟರೆ, ವಯಸ್ಸು ಹೆಚ್ಚಾದರೂ ದೇಹ ಮತ್ತು ಮನಸ್ಸು ಚೈತನ್ಯದಿಂದ ತುಂಬಿರುತ್ತದೆ. ಯೋಗವನ್ನು ಜೀವನದ ಭಾಗವನ್ನಾಗಿ ಮಾಡಿ – ಆರೋಗ್ಯಕರ ವೃದ್ಧಾಪ್ಯವನ್ನು ಅನುಭವಿಸಿ.
ಬರಹ : ಡಾ|| ಪಲ್ಲವಿ. ಎಸ್ ಎಲ್, ಸಹಾಯಕ ಪ್ರಾಧ್ಯಾಪಕಿ , ಸ್ವಸ್ಥವೃತ್ತ ಮತ್ತು ಯೋಗ ವಿಭಾಗ ,ಟಿ.ಎಂ.ಎ.ಇ.ಎಸ್ ಅಯುರ್ವೇದ ಮೆಡಿಕಲ್ ಕಾಲೇಜ್ ನಿದಿಗೆ, ಶಿವಮೊಗ್ಗ
