ತುಮರಿ ಕಾಡಲ್ಲಿ ಸಿಕ್ತು ಹೆಣ! ತೀರ್ಥಹಳ್ಳಿಯಲ್ಲಿ ಬೇಲಿಗೂಟದ ಫೈಟ್​!ಶಿವಮೊಗ್ಗದಲ್ಲಿ ಗಾರೆ ಕೆಲಸದವ್ರು ತಗ್ಲಾಕ್ಕೊಂಡ್ರು! ಜೂನ್​ 01 ರ ಅಪ್​ಡೇಟ್​ ಓದಿ

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಒಂದೆ ವರದಿಯಲ್ಲಿ ಗಮನಿಸುವುದಾದರೆ, ಆ ಬಗೆಗಿನ ವಿವರ ಹೀಗಿದೆ. ತೀರ್ಥಹಳ್ಳಿ ತಾಲೂಕಿನ ಹೆದ್ದೂರು-ಕಟ್ಟೆಹಕ್ಕಲು ಮಾರ್ಗದ ಸೊಪ್ಪುಗುಡ್ಡೆ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸಾಲ್ಗುಡಿ ಗ್ರಾಮ ಪಂಚಾಯಿತಿಯ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಸಂತೋಷ್ (39) ಎಂಬುವವರ ಶವವು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಸಂತೋಷ್ ಅವರು ಧರಿಸಿದ್ದ ಉಡುಪಿನ ಜೇಬಿನಲ್ಲಿ ಡೆತ್ ನೋಟ್ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಡೆತ್ ನೋಟ್‌ನಲ್ಲಿ ಗ್ರಾಮ ಪಂಚಾಯಿತಿಯ ಆಡಳಿತದ ಪ್ರಮುಖ ಅಧಿಕಾರಿ ಹಾಗೂ ಸಿಬ್ಬಂದಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅವಿವಾಹಿತರಾಗಿದ್ದ ಸಂತೋಷ್ ಅವರು ಇತ್ತೀಚಿನ ದಿನಗಳಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರು ಹಾಗೂ ಸಾಲದ ಬಾಧೆಯಿಂದ ಆತಂಕಕ್ಕೆ ಒಳಗಾಗಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಡೆತ್ ನೋಟ್ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಹಣ ಕದ್ದಿದ್ದ ಇಬ್ಬರ ಬಂಧನ

ಇತ್ತ ಶಿವಮೊಗ್ಗ ನಗರದ ಕಾಶಿಪುರ ಲಕ್ಕಪ್ಪ ಬಡಾವಣೆಯಲ್ಲಿ ಹಾಡಹಗಲೇ ಮನೆಯಲ್ಲಿ 7 ಲಕ್ಷ ರೂ. ಕಳವು ಮಾಡಿದ ಪ್ರಕರಣ ವನ್ನು ಭೇದಿಸಿರುವ ವಿನೋಬನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಟಿಪ್ಪುನಗರ ಎಡಭಾಗ 1ನೇ ಕ್ರಾಸ್‌ನ ಮೊಹಮದ್ ಸಲೀಮ್ (27) ಮತ್ತು ಮೊಹ ಮದ್ ರಜಾಕ್ (26) ಬಂಧಿತರು. ಇವರಿಬ್ಬರು ಲಕ್ಕಪ್ಪ ಬಡಾವಣೆಯ ಎಚ್.ಎಲ್. ಸೋಮಶೇಖರ್ ಅವರ ಮನೆಯಲ್ಲಿ ಗಾರೆ ಕೆಲಸ ಮಾಡುತ್ತಿರುವಾಗಲೆ ಮೇ 26ರಂದು ಮಧ್ಯಾಹ್ನ ಮನೆಯವರ ಅರಿವಿಗೆ ಬರದಂತೆ 7 ಲಕ್ಷ ರೂ. ನಗದು ಕಳವು ಮಾಡಿದ್ದರು. ಸೋಮಶೇಖರ್ ಅವರಿಗೆ ಇದು ಮಾರನೇ ದಿನ ಗೊತ್ತಾಗಿ ವಿನೋಬನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 5.13 ಲಕ್ಷರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ತೀರ್ಥಹಳ್ಳಿ : ರಸ್ತೆಗೆ ಬೇಲಿ ವಿವಾದ, ದಂಪತಿ ಮೇಲೆ ಹಲ್ಲೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ರಸ್ತೆಗೆ ಬೇಲಿ ನಿರ್ಮಿಸುವ ವಿಷಯವಾಗಿ ವಿವಾದ ತಾರಕಕ್ಕೇರಿ ದಂಪತಿ ಮೇಲೆ ತೀವ್ರ ಹಲ್ಲೆ ಮಾಡಿದ ಘಟನೆ ತಾಲೂಕಿನ ಹಾದಿಗಲ್ಲು ಗ್ರಾ.ಪಂ. ವ್ಯಾಪ್ತಿಯ ಕರಡಿಗ ಗ್ರಾಮದಲ್ಲಿ ನಡೆದಿದೆ. ರಸ್ತೆಗೆ ಬೇಲಿ ನಿರ್ಮಿಸುವುದನ್ನು ಪ್ರಶ್ನಿಸಿದಾಗ ವಾಗ್ಯುದ್ದ ನಡೆದು 6 ಜನರ ಗುಂಪು ಅಮೂಲ್ಯ ಹಾಗೂ ಅವರ ಪತಿ ಶಿವಶಂಕರ ಮೇಲೆ ಹಲ್ಲೆ ನಡೆಸಿದೆ ಎಂದು ಅಮೂಲ್ಯ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಂಪತಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಬ್ಯಾಕೋಡು ಸಮೀಪದ ಹೊಳೆಬಾಗಿಲು ಕಳಸವಳ್ಳಿ ಗ್ರಾಮದ ಕಾಡಿನಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯೊಬ್ಬರ ಶವವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟಿರುವ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ತುಮರಿ ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ಶವಸಂಸ್ಕಾರವನ್ನು ನೆರವೇರಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw