ಬಸ್ ಡಿಫೋ ಹಿಂಭಾಗ & ಶರಾವತಿ ನಗರ! ಇಬ್ಬರು ವಶಕ್ಕೆ!ಒಬ್ಬ ತಗೊಂಡಿದ್ದ! ಮತ್ತೊಬ್ಬ ಇಟ್ಕೊಂಡಿದ್ದ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನ ಸಂಶಯದ ಮೇರೆಗೆ ವಶಕ್ಕೆ ಪಡೆದು ಕೇಸ್ ದಾಖಲಿಸಲಾಗಿದೆ.

ಮೊದಲನೇ ಪ್ರಕರಣ ದಿನಾಂಕ 26/05/2026 ರಂದು ನಡೆದಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹಿಂಭಾಗದ ಮಹಾನಗರ ಪಾಲಿಕೆಗೆ ಸೇರಿದ ಖಾಲಿ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 25 ವರ್ಷದ ಕಿಶೋರ್ ಕೆ. ಬಿನ್ ಮಂಜುನಾಥ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಂಜುನಾಥ ಬಡಾವಣೆಯ ನಿವಾಸಿ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಗಾಂಜಾ ಮಾರಾಟದ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ದೊಡ್ಡಪೇಟೆ ಠಾಣೆಯ ಪಿ.ಎಸ್.ಐ ಎಂ.ಎನ್ ಅಂಬಿಗೇರ ಅವರ ನೇತೃತ್ವದ ಸಿಬ್ಬಂದಿ ತಂಡ ದಾಳಿ ನಡೆಸಿದೆ.

ದಾಳಿಯ ವೇಳೆ ಆರೋಪಿಯ ಬಳಿ ಇದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಒಟ್ಟು 582 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ 35000 ರೂಪಾಯಿಗಳಾಗಿದೆ. ಇದರೊಂದಿಗೆ 5 ಖಾಲಿ ಪ್ಲಾಸ್ಟಿಕ್ ಪೌಚ್‌ಗಳು ಹಾಗೂ ಗಾಂಜಾ ಮಾರಾಟ ಮಾಡಿ ಸಂಗ್ರಹಿಸಿದ್ದ 290 ರೂಪಾಯಿ ನಗದು ಹಣ ಸೇರಿ ಒಟ್ಟು 35290 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ 1985 ರ ಸೆಕ್ಷನ್ 20(b) (ii) A ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶರಾವತಿ ನಗರದಲ್ಲಿ ಯುವಕ ವಶಕ್ಕೆ

ಎರಡನೇ ಪ್ರಕರಣದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶರಾವತಿ ನಗರದ 4ನೇ ಕ್ರಾಸ್‌ನಲ್ಲಿರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ ದಿನಾಂಕ 25/05/2026 ರಂದು ನಡೆದ ಘಟನೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಗುರುನಾಯ್ಕ್ ಆರ್. ಅವರು ಅನುಮಾನಾಸ್ಪದವಾಗಿ ನಿಂತಿದ್ದ ಯುವಕನನ್ನು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಮೆಗ್ರಾನ್ ಬೋಧನಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ, ಆತ ಗಾಂಜಾ ಸೇವಿಸಿರುವುದು ವೈದ್ಯರ ವರದಿಯಿಂದ ದೃಢಪಟ್ಟಿದೆ. ಈತನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯ ಸೆಕ್ಷನ್ 27(b) ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.