ಜೆಂಜಿಗೂ ಗಂಜಿ ಕುಡಿಸುವ ಆನ್​ಲೈನ್​  : ಮೋಸಕ್ಕೂ ಲೇಡಿಸ್ ಫಸ್ಟ್! ಮಿಸ್ ಮಾಡದೇ ಓದಿ!

Shivamogga Cyber Crime ಶಿವಮೊಗ್ಗ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸೈಬರ್ ಕ್ರೈಂ ಪೊಲೀಸರು ಆನ್‌ಲೈನ್ ವಂಚನೆಗಳ ಬಗ್ಗೆ ಪ್ರತಿದಿನ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಸಾರ್ವಜನಿಕರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ ಪ್ರತಿದಿನ ಒಂದಲ್ಲ ಒಂದು ಕೇಸ್​ಗಳು ದಾಖಲಾಗುತ್ತಲೇ ಇವೆ.

ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಈ ದಿನ ಕರೆಂಟ್​​ ಇರಲ್ಲ  

ವಾಟ್ಸಾಪ್ ಸ್ಟೇಟಸ್, ಪೋಸ್ಟರ್‌ಗಳು ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಅಪರಿಚಿತ ಸಂದೇಶಗಳನ್ನು, ಲಿಂಕ್‌ಗಳನ್ನು ನಂಬಬೇಡಿ ಎಂದು ಪೊಲೀಸ್ ಇಲಾಖೆ ನಿರಂತರವಾಗಿ ಎಚ್ಚರಿಕೆ ನೀಡುತ್ತಲೇ ಇದೆ. ಆದಾಗ್ಯೂ ಜನಸಾಮಾನ್ಯರು, ಅದರಲ್ಲೂ ವಿದ್ಯಾವಂತ ಯುವಜನತೆ ಅತ್ಯಂತ ಸುಲಭವಾಗಿ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ, ಶಿವಮೊಗ್ಗದ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇವಲ ಎರಡು ದಿನಗಳ ಅಂತರದಲ್ಲಿ ಎರಡು ಪ್ರತ್ಯೇಕ ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸಂತ್ರಸ್ತರು ಬರೋಬ್ಬರಿ ಹದಿನಾಲ್ಕು ಲಕ್ಷಕ್ಕೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದಾರೆ. ಅಧಿಕ ಲಾಭದ ಆಸೆ ಹಾಗೂ ಸುಲಭ ಉದ್ಯೋಗದ ಆಮಿಷಕ್ಕೆ ಬಲಿಯಾಗಿ ತಮ್ಮ ಕಷ್ಟದ ಹಣವನ್ನು ಸೈಬರ್ ವಂಚಕರ ಖಾತೆಗೆ ಜಮೆ ಮಾಡಿ ಇದೀಗ ಕಂಗಾಲಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಮೊದಲ ಪ್ರಕರಣದಲ್ಲಿ, ನಗರದ ನಿವಾಸಿಯೊಬ್ಬರು ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ಹತ್ತತ್ತಿರ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕಳೆದ ಮಾರ್ಚ್ 12 ರಂದು ವಾಟ್ಸಾಪ್ ಬಳಸುತ್ತಿದ್ದಾಗ ಅಪರಿಚಿತರು ಸಂತ್ರಸ್ತರ ನಂಬರ್ ಅನ್ನು ವಿಐಪಿ ಎಂಬ ವಾಟ್ಸಾಪ್ ಗ್ರೂಪಿಗೆ ಸೇರ್ಪಡೆ ಮಾಡಿರುವ ಬಗ್ಗೆ ನೋಟಿಫಿಕೇಷನ್ ಬಂದಿತ್ತು. ಆ ಗ್ರೂಪ್‌ನಲ್ಲಿ ಝನ್ಸ್ಕಾರ್ ಸೆಕ್ಯೂರಿಟೀಸ್ ಪ್ರೈವೇಟ್ ಎಂಬ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭಾಂಶ ಮಾಡಿಕೊಡುವುದಾಗಿ ವಂಚಕರು ಸಂದೇಶಗಳನ್ನು ಕಳುಹಿಸಿದ್ದರು. ಇದನ್ನು ಸಂಪೂರ್ಣವಾಗಿ ನಂಬಿದ ಸಂತ್ರಸ್ತರು ಮಾರ್ಚ್ 20 ರಿಂದ ಮೇ 15 ರವರೆಗೆ ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ನಾಲ್ಕು ಹಂತಗಳಲ್ಲಿ ಒಟ್ಟು 9,91,081 ರೂಪಾಯಿಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. 

Shivamogga Cyber Crime ತಾವು ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶವನ್ನು ವಿತ್ ಡ್ರಾ ಕೇಳಿದಾಗ, ವಂಚಕರು ಶೇಕಡಾ 20 ರಷ್ಟು ಹೆಚ್ಚುವರಿ ಹಣವನ್ನು ನೀಡಿದರೆ ಮಾತ್ರ ವಿತ್ ಡ್ರಾ ಮಾಡಲು ಅವಕಾಶ ನೀಡುವುದಾಗಿ ಷರತ್ತು ವಿಧಿಸಿದ್ದಾರೆ.ತಾವು ಹೂಡಿಕೆ ಮಾಡಿದ ಹಣದಲ್ಲೇ ಶೇಕಡಾ 20 ರಷ್ಟು ಹಣವನ್ನು ಕಡಿತಗೊಳಿಸಿ ಉಳಿದ ಹಣವನ್ನು ಕೊಡುವಂತೆ ಸಂತ್ರಸ್ತರು ಕೇಳಿಕೊಂಡಾಗ, ವಂಚಕರು ತಮ್ಮ ವೆಬ್ ಪೇಜ್ ಅನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಿದ್ದಾರೆ.  ತದನಂತರ ಅನುಮಾನಗೊಂಡು ಬೆಂಗಳೂರಿನಲ್ಲಿರುವ ಮೂಲ ಕಂಪನಿಗೆ ಕರೆ ಮಾಡಿ ವಿಚಾರಿಸಿದಾಗ, ಆ ಕಂಪನಿಯ ಹೆಸರಿನಲ್ಲಿ ಅಪರಿಚಿತರು ನಕಲಿ ಖಾತೆ ಸೃಷ್ಟಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮೇ 23 ರಂದು ಶಿವಮೊಗ್ಗ ಸೆನ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ.  

ಮತ್ತೊಂದು ಪ್ರಕರಣದಲ್ಲಿ, ತೀರ್ಥಹಳ್ಳಿ ತಾಲೂಕಿನ ಯುವತಿಯೊಬ್ಬರು ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯುವ ಆಸೆಗೆ ಬಿದ್ದು ತಮ್ಮ ಸ್ನೇಹಿತೆಯರೊಟ್ಟಿಗೆ ಐದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಮಾರ್ಚ್ 18 ರಂದು ಅಪರಿಚಿತ ವಾಟ್ಸಾಪ್ ನಂಬರ್‌ನಿಂದಸಂದೇಶವೊಂದು ಬಂದಿದ್ದು, ಎನ್‌ಟಿಟಿ ಡಾಟಾಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಲಾಗಿದೆ. 

ಕೆಲಸದ ಆಫರ್ ಲೆಟರ್ ಬಂದ ನಂತರ ಕಮಿಷನ್ ಹಣ ನೀಡಬೇಕು ಎಂದು ವಂಚಕರು ಷರತ್ತು ವಿಧಿಸಿದ್ದರು. ಈ ಮಾತನ್ನು ನಂಬಿದ ಯುವತಿ ತನ್ನ ಇತರ ಮೂವರು ಸ್ನೇಹಿತೆಯರಿಗೂ ವಿಷಯ ತಿಳಿಸಿದ್ದು, ನಾಲ್ವರೂ ಸೇರಿ ತಮ್ಮ ಬಯೋಡೇಟಾವನ್ನು ವಂಚಕರಿಗೆ ಕಳುಹಿಸಿದ್ದರು. ಆನ್‌ಲೈನ್ ಮೂಲಕ ನಕಲಿ ಇಂಟರ್‌ವ್ಯೂ ನಡೆಸುವ ನಾಟಕವಾಡಿದ ವಂಚಕರು, ನಂತರ ನಕಲಿ ಆಫರ್ ಲೆಟರ್ ಕಳುಹಿಸಿ ಕಮಿಷನ್ ರೂಪದಲ್ಲಿ ಹಂತ ಹಂತವಾಗಿ 5,00,000 ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ. ಹಣ ಪಾವತಿಸಿದ ಬಳಿಕ ಕೆಲಸಕ್ಕೆ ಸೇರಲು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಎನ್‌ಟಿಟಿ ಡಾಟಾ ಕಂಪನಿಗೆ ಖುದ್ದಾಗಿ ತೆರಳಿದಾಗ, ಅಲ್ಲಿನ ಭದ್ರತಾ ಸಿಬ್ಬಂದಿಯು ಇವರ ಯಾವುದೇ ದತ್ತಾಂಶ ಕಂಪನಿಯಲ್ಲಿ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. 

ಕೆಲಸ ಕೊಡಿಸುವುದಾಗಿ ಹೇಳಿದ್ದ ನಕಲಿ ಹೆಚ್.ಆರ್ ಸಂಪರ್ಕ ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಾವು ಸಂಪೂರ್ಣವಾಗಿ ಮೋಸ ಹೋಗಿರುವುದು ಯುವತಿಯರಿಗೆ ಅರಿವಾಗಿದೆ. ಈ ಸಂಬಂಧ ಮೇ 22 ರಂದು ಪ್ರಕರಣ ದಾಖಲಾಗಿದೆ.  

ಇದಕ್ಕೂ ಮೊದಲು ದಾಖಲಾದ ಪ್ರಕರಣದಲ್ಲಿ ಸಂತ್ರಸ್ತರೇ ಅಪರಾಧಿಯಾಗುವ ಅಪಾಯವೂ ಎದುರಾಗಿತ್ತು. ಈ ಪ್ರಕರಣದಲ್ಲಿ ಶಿವಮೊಗ್ಗ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಯೊಬ್ಬರಿಗೆ ಲೋನ್ ಕೊಡಿಸುವುದಾಗಿ ನಂಬಿಸಿ, ಅವರ ಬ್ಯಾಂಕ್ ಖಾತೆಯನ್ನೇ ಮ್ಯೂಲ್ ಅಕೌಂಟ್​​ಗೆ ಬಳಸಿಕೊಂಡಿದ್ದರು. ಈ ಸಂಬಂಧ ಬೆಂಗಳೂರು ಮೂಲದ ಆರೋಪಿಯೊಬ್ಬನನ್ನು ಶಿವಮೊಗ್ಗದ ಸೈಬರ್ ಕ್ರೈಮ್  ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ಬೆಂಗಳೂರು ಮೂಲದ ಅಂಕಿತ್ (34) ಎಂದು ಗುರುತಿಸಲಾಗಿದೆ.

ಶಿವಮೊಗ್ಗದ ಷಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ದೂರದಾರ ಮಹಿಳೆಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಪರಿಚಯವಾಗಿದ್ದರು. ಮಹಿಳಾ ಸಂಘ ಮಾಡಿಸಿ ಅದಕ್ಕೆ ಲೋನ್ ಕೊಡಿಸುವುದಾಗಿ ನಂಬಿಸಿದ್ದ ಮಹಿಳೆ , ಬೆಂಗಳೂರಿನ ಅಂಕಿತ್ ಎಂಬಾತನ ಮೂಲಕ ಕಳೆದ 2025 ರ ಜುಲೈ 25 ರಂದು ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಸಿಟಿ ಯೂನಿಯನ್ ಬ್ಯಾಂಕ್‌ನಲ್ಲಿ ಮಹಿಳೆಯ ಹೆಸರಲ್ಲಿ ಉಳಿತಾಯ ಖಾತೆಯನ್ನು ತೆರೆಸಿದ್ದರು. ಖಾತೆ ತೆರೆದ ಬಳಿಕ ಲೋನ್ ಪ್ರಕ್ರಿಯೆಗೆ ಬೇಕಾಗುತ್ತದೆ ಎಂದು ನಂಬಿಸಿ, ಬ್ಯಾಂಕ್ ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್‌ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ಸಿಮ್ ಕಾರ್ಡ್‌ ಅನ್ನು ಅಂಕಿತ್ ತನ್ನ ಬಳಿಯೇ ಇಟ್ಟುಕೊಂಡಿದ್ದ. ಆದರೆ ದಿನಗಳು ಕಳೆದರೂ ಮಹಿಳೆಗೆ ಯಾವುದೇ ಲೋನ್ ಕೊಡಿಸಿರಲಿಲ್ಲ. ಅನುಮಾನಗೊಂಡು ಮಹಿಳೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಯಾವುದೇ ಸಂಪರ್ಕ ಸಿಕ್ಕಿರಲಿಲ್ಲ. ಲೋನ್ ಆಸೆ ತೋರಿಸಿ ಮಹಿಳೆಯ ಬ್ಯಾಂಕ್ ವಿವರ ಹಾಗೂ ಸಿಮ್ ಕಾರ್ಡ್ ಪಡೆದುಕೊಂಡಿದ್ದ ಆರೋಪಿಗಳು, ಸಂತ್ರಸ್ತ ಮಹಿಳೆಯ ಬ್ಯಾಂಕ್ ಖಾತೆಯನ್ನು ಸೈಬರ್ ಅಪರಾಧಗಳ ವಂಚನೆಯ ಹಣವನ್ನು ವರ್ಗಾಯಿಸಲು ಬಳಸಿಕೊಂಡಿದ್ದಾರೆ. ಪೊಲೀಸರ ತನಿಖೆಯ ವೇಳೆ ಆರೋಪಿಗಳು ವಂಚನೆಗೆ ಬಳಸಿದ ಇಂತಹ ಒಟ್ಟು 4 ಮ್ಯೂಲ್ ಖಾತೆಗಳಲ್ಲಿ ಭಾರಿ ಪ್ರಮಾಣದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಬರೋಬ್ಬರಿ 32,43,000 ಕ್ಕೂ ಹೆಚ್ಚು ರೂಪಾಯಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನನ್ವಯ ಶಿವಮೊಗ್ಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ಕಳೆದ ಫೆಬ್ರವರಿ 13ರಂದು ಶಾದಿ ಡಾಟ್ ಕಾಂ ಆಪ್‌ನಲ್ಲಿ ವಿಮರ್ಷಾ ಎಂಬ ಪ್ರೊಫೈಲ್ ಐಡಿಯನ್ನು ನಂಬಿ ವ್ಯಕ್ತಿಯೊಬ್ಬರು ಮೋಸ ಹೋಗಿದ್ದರು. ಶಾದಿ ಡಾಟ್ ಕಾಂ ಆಪ್‌ನಲ್ಲಿ ಲಂಡನ್ ಮೂಲದ ಮೊಬೈಲ್​ ನಂಬರ್​ ಒಂದಕ್ಕೆ ವಾಟ್ಸ್ ಆಪ್ ಮೂಲಕ ಸಂತ್ರಸ್ತರು ಸಂಪರ್ಕ ಬೆಳೆಸಿದ್ದರು. ಚಾಟಿಂಗ್ ವೇಳೆ ಎದುರಿನ ವ್ಯಕ್ತಿ ತನ್ನ ಹೆಸರು ವಿಮರ್ಶ ಎಂದು, ತಾನು ಲಂಡನ್‌ನಲ್ಲಿ ಚಿಕ್ಕಪ್ಪನ ಜೊತೆ ವಾಸವಿರುವುದಾಗಿ ಪರಿಚಯ ಮಾಡಿಕೊಂಡಿದ್ದಾಳೆ.  ಪರಿಚಯ ವಾಗುತ್ತಿದ್ದಂತೆ ಆರೋಪಿಯು www.mivonexchange.com ಎಂಬ ವೆಬ್‌ಸೈಟ್ ಮೂಲಕ ಆನ್‌ಲೈನ್ ಟ್ರೇಡಿಂಗ್ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದಾಳೆ. ಟ್ರೇಡಿಂಗ್ ಪ್ರಕ್ರಿಯೆಗಾಗಿ ಹಣ ಹೂಡಿಕೆ ಮಾಡಲು  ವಿವಿಧ ಬ್ಯಾಂಕ್​ ಖಾತೆಗೆಳ ನಂಬರ್​ನ್ನು ನೀಡಿದ್ದಾಳೆ. ಅಪರಿಚಿತ ವ್ಯಕ್ತಿಯ ಮಾತುಗಳನ್ನು ನಂಬಿದ ದೂರುದಾರರು ಹಂತ ಹಂತವಾಗಿ ನಾಲ್ಕು ಬಾರಿ ತಮ್ಮ ಬ್ಯಾಂಕ್ ಖಾತೆಯಿಂದ ಒಟ್ಟು 18,00,000 ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ, ಹಣ ಜಮೆಯಾದ ಕೆಲ ದಿನಗಳ ನಂತರ ಸದರಿ ಟ್ರೇಡಿಂಗ್ ಖಾತೆಯನ್ನು ಡಿಆಕ್ಟಿವೇಟ್ ಮಾಡಲಾಗಿದೆ. ಇದಾದ ಬಳಿ ಸಂತ್ರಸ್ತರಿಗೆ ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ತಿಳಿದು ಬಂದಿದೆ.

Shivamogga Cyber Crime ದಿನೇ ದಿನೇ ಮಿತಿಮೀರುತ್ತಿರುವ ಇಂತಹ ಆನ್‌ಲೈನ್ ವಂಚನೆಗಳಿಂದ ಪಾರಾಗಲು ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಇಂದಿನ ತುರ್ತು ಅಗತ್ಯ. ಸೈಬರ್ ಪೊಲೀಸರು ನೀಡುವ ಎಚ್ಚರಿಕೆಗಳನ್ನು ಕಡೆಗಣಿಸದೆ, ಅಪರಿಚಿತ ವಾಟ್ಸಾಪ್ ಸಂಖ್ಯೆಗಳಿಂದ ಬರುವ ಸಂದೇಶಗಳನ್ನು ಅಥವಾ ಯಾವುದೇ ಆಮಿಷವೊಡ್ಡುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ನಿಮ್ಮ ಅನುಮತಿ ಇಲ್ಲದೆ ಯಾವುದೇ ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳಿಗೆ ಸೇರ್ಪಡೆಗೊಂಡರೆ ತಕ್ಷಣವೇ ಅದರಿಂದ ಹೊರಬರುವುದು ಹಾಗೂ ಆ ನಂಬರ್‌ಗಳನ್ನು ಬ್ಲಾಕ್ ಮಾಡುವುದು ಸೂಕ್ತ. ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಅತಿ ಹೆಚ್ಚಿನ ಲಾಭಾಂಶ ನೀಡುತ್ತೇವೆ, ದುಪ್ಪಟ್ಟು ಹಣ ನೀಡುತ್ತೇವೆ ಎಂದು ಹೇಳುವ ಯಾವುದೇ ಸುಳ್ಳು ಜಾಹೀರಾತುಗಳನ್ನು ನಂಬಬಾರದು, ಬದಲಾಗಿ ಸೆಬಿ (SEBI) ಮಾನ್ಯತೆ ಪಡೆದ ಅಧಿಕೃತ ಸಂಸ್ಥೆಗಳ ಮೂಲಕ ಮಾತ್ರ ಹೂಡಿಕೆ ಮಾಡುವುದು ಸುರಕ್ಷಿತ. ಅದೇ ರೀತಿ, ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗದ ಆಮಿಷವೊಡ್ಡಿ ಹಣ ಅಥವಾ ಕಮಿಷನ್ ಕೇಳುವ ನಕಲಿ ಸಂದೇಶಗಳಿಗೆ ಮರುಳಾಗಬಾರದು. ಯಾವುದೇ ನೈಜ ಹಾಗೂ ದೊಡ್ಡ ಕಂಪನಿಯು ಉದ್ಯೋಗ ನೀಡಲು ಅಭ್ಯರ್ಥಿಗಳಿಂದ ಮುಂಗಡವಾಗಿ ಹಣ ಕೇಳುವುದಿಲ್ಲ ಎಂಬುದನ್ನು ಉದ್ಯೋಗಾಕಾಂಕ್ಷಿಗಳು ಅರಿತುಕೊಳ್ಳಬೇಕು. ಉದ್ಯೋಗದ ಆಫರ್ ಲೆಟರ್ ಬಂದ ತಕ್ಷಣ ಅದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ನೇರ ದೂರವಾಣಿ ಸಂಪರ್ಕದ ಮೂಲಕ ಕಡ್ಡಾಯವಾಗಿ ಪರಿಶೀಲನೆ ಮಾಡಿಕೊಳ್ಳಬೇಕು. ಒಂದು ವೇಳೆ ಆಕಸ್ಮಿಕವಾಗಿ ಆನ್‌ಲೈನ್ ವಂಚನೆಗೆ ಒಳಗಾಗಿದ್ದರೆ, ಗಾಬರಿಗೊಳ್ಳದೆ ತಕ್ಷಣವೇ ಸೈಬರ್ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸುವ ಮೂಲಕ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ತ್ವರಿತ ಪ್ರಯತ್ನ ಮಾಡಬೇಕು. 

ಒಟ್ಟಾರೆ ನಾನಾ ವೇಷ ಆಮೀಷದ ಮೂಲಕ ಅಂಕೆಯಿಲ್ಲದ ಸಂಖ್ಯೆಗಳ ಮೂಲಕ ಡಿಸ್ಟನ್ಸ್ ಮೋಸದ ಪ್ರಾಜೆಕ್ಟ್​ಗಳು ಮೊಬೈಲ್​ಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಅರಿವು ಹೊಂದುವುದು ಮಾತ್ರವೇ ಮೋಸದ ಬಲೆಗೆ ಸಿಗದಂತೆ ಬಚಾವ್ ಆಗುವ ದಾರಿ.

Shivamogga Cyber Crime Trading & Job Scams

Shivamogga Cyber Crime Trading & Job Scams
Shivamogga Cyber Crime Trading & Job Scams