BHADRAVATI

ಬೊಮ್ಮನಕಟ್ಟೆ ಬಳಿ ಅರಣ್ಯ ಇಲಾಖೆ ದಾಳಿ: 20 ಕೆ.ಜಿ ಜಿಂಕೆ ಮಾಂಸ, ಎರಡು ಆಟೊ ವಶಕ್ಕೆ! ಪೂರ್ತಿ ವರದಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಪಟ್ಟಣದ ಸುತ್ತಮುತ್ತ ವರದಿಯಾಗಿರುವ ಎರಡು ಪ್ರತ್ಯೇಕ ಗಂಭೀರ ಅಪರಾಧ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ತ್ವರಿತ ಕಾರ್ಯಾಚರಣೆಗಳನ್ನು ನಡೆಸಿ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೊಮ್ಮನಕಟ್ಟೆ ಬಳಿ ಜಿಂಕೆ ಮಾಂಸ ಮಾರಾಟ ಜಾಲ ಭೇದಿಸಿದ ಅರಣ್ಯ ಇಲಾಖೆ

ಮೊದಲ ಪ್ರಕರಣದಲ್ಲಿ ವನ್ಯಜೀವಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಬೇಧಿಸಿದೆ.

ಭದ್ರಾವತಿ ಸಮೀಪದ ಬೊಮ್ಮನಕಟ್ಟೆ ಬಳಿ ಭಾನುವಾರದಂದು ಅರಣ್ಯ ಇಲಾಖೆಯ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದರು.

ಈ ವೇಳೆ ಜಿಂಕೆಯನ್ನು ಅಕ್ರಮವಾಗಿ ಬೇಟೆಯಾಡಿ, ಅದರ ಮಾಂಸವನ್ನು ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದ ಚಂದ್ರಶೇಖರ್, ಮೂರ್ತಿ ಹಾಗೂ ಮುನ್ನಾ ಎಂಬ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆದರೆ, ಈ ಕೃತ್ಯದ ಪ್ರಮುಖ ರೂವಾರಿ ಎಂದು ಗುರ್ತಿಸಲಾಗಿರುವ ಆರ್ಮುಗ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

20 ಕೆ ಜಿ ಜಿಂಕೆ ಮಾಂಸ ವಶ

ಬಂಧಿತ ಆರೋಪಿಗಳ ಬಳಿ, 5 ಪ್ರತ್ಯೇಕ ಪ್ಲಾಸ್ಟಿಕ್ ಕವರ್‌ಗಳಲ್ಲಿ , ಅಂದಾಜು 20 ಕೆ.ಜಿ ತೂಕದ ಜಿಂಕೆ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರೊಂದಿಗೆ, ಮಾಂಸ ಸಾಗಾಟಕ್ಕೆ ಬಳಸಲಾಗಿದ್ದ 2 ಆಟೊಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭದ್ರಾವತಿ ವಲಯ ಅರಣ್ಯಾಧಿಕಾರಿ ರಾಜೇಶ್ ಕೆ.ಆರ್. ಅವರ ನೇತೃತ್ವದ ವಿಶೇಷ ತಂಡವು ಈ ಕಾರ್ಯಾಚರಣೆಯನ್ನು ನಿರ್ವಹಿಸಿದೆ.

ಮಹಿಳೆ ಮೇಲೆ ಅತ್ಯಾಚಾರದ ಆರೋಪ ಬಿಜೆಪಿ ಮುಖಂಡ ಅರೆಸ್ಟ್

ಇನ್ನೊಂದು ಪ್ರಕರಣದಲ್ಲಿ, ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಮುಖಂಡರೊಬ್ಬರನ್ನು ಪೇಪರ್ ಟೌನ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮನೆಯಲ್ಲಿ ಬೇರೆ ಯಾರೂ ಇರದ ಸಮಯವನ್ನು ನೋಡಿಕೊಂಡು ಒಳನುಗ್ಗಿದ್ದ ಆರೋಪಿಯು, ಸಂತ್ರಸ್ತೆಯ ಮೇಲೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರಲಾಗಿದೆ.

ಈ ಸಂಬಂಧ ಸಂತ್ರಸ್ತೆಯು ಮೇ 18ರಂದು ಪೇಪರ್ ಟೌನ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೆ ಆರೋಪಿ ಪರಾರಿಯಾಗಿದ್ದ , ನಿನ್ನೆ ಸೋಮವಾರ ಆತನನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಪ್ರಸ್ತುತ ಆರೋಪಿ ವಿರುದ್ಧ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY