ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪರಿಣಾಮ ಆಕೆಯು ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಇಲ್ಲಿನ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (FTSC-I) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ 2022 ನೇ ಸಾಲಿನಲ್ಲಿ ಈ ಘಟನೆ ಜರುಗಿದ್ದು, 30 ವರ್ಷ ವಯಸ್ಸಿನ ಯುವಕನೊಬ್ಬ 17 ವರ್ಷದ ನೊಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಆರೋಪಿಯ ಈ ಕೃತ್ಯದಿಂದಾಗಿ ಅಪ್ರಾಪ್ತಯು ಗರ್ಭಿಣಿಯಾಗಿದ್ದಳು. ಈ ಗಂಭೀರ ಪ್ರಕರಣದ ಕುರಿತಂತೆ ಪೊಲೀಸ್ ಠಾಣೆ ಒಂದರಲ್ಲಿ ಪೋಕೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಆಗಿನ ತನಿಖಾಧಿಕಾರಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಕೆ ಮಾಡಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಅವರು ಅತ್ಯಂತ ಸಮರ್ಥವಾಗಿ ವಾದ ಮಂಡಿಸಿದ್ದರು.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
ಆರೋಪಿಗೆ 20 ವರ್ಷ ಶಿಕ್ಷೆ!
ಈ ಪ್ರಕರಣದ ವಿಚಾರಣೆಯನ್ನು ಸಂಪೂರ್ಣವಾಗಿ ಆಲಿಸಿದ ಶಿವಮೊಗ್ಗದ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (FTSC-1) ಮಾನ್ಯ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್ ಅವರು, ಆರೋಪಿಯ ಮೇಲಿನ ಆರೋಪಗಳು ಸಾಕ್ಷಾಧಾರಗಳ ಸಮೇತ ದೃಢಪಟ್ಟ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದ್ದಾರೆ.
ಅಪರಾಧಿಗೆ 20 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ 2,00,000 ರೂಪಾಯಿಗಳ ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ, ನೊಂದ ಬಾಲಕಿಗೆ ಪರಿಹಾರವಾಗಿ 1,80,000 ರೂಪಾಯಿಗಳನ್ನು ನೀಡುವಂತೆಯೂ ನ್ಯಾಯಾಲಯವು ತನ್ನ ಆದೇಶದಲ್ಲಿ ಸಷ್ಟ ಪಡಿಸಿದೆ.

