ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ವಿಐಎಸ್ಎಲ್ ಕಾರ್ಖಾನೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಬ್ಬಿಣದ ಬಿಲ್ಲೆಟ್ ಬಿದ್ದು ಗುತ್ತಿಗೆ ಕಾರ್ಮಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಭದ್ರಾವತಿ ವಿಐಎಸ್‌ಎಲ್ ದುರ್ಘಟನೆ
ಭದ್ರಾವತಿಯ ನಿವಾಸಿ ವಿನೋದ್ ಕುಮಾರ್ ಎಸ್ (36) ಮೃತಪಟ್ಟ ನೌಕರ. ಕಳೆದ 15 ವರ್ಷಗಳಿಂದ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವಿನೋದ್. ವಿಐಎಸ್ಎಲ್ ಆವರಣದಲ್ಲಿ ಕಬ್ಬಿಣದ ಬಿಲ್ಲೆಟ್ ಅನ್ನು ಅನ್‌ಲೋಡ್ ಮಾಡುವ ಕೆಲಸದಲ್ಲಿದ್ದರು. ಈ ವೇಳೆ ಅವಗಢ ಸಂಭವಿಸಿದೆ.
ಕಾರ್ಖಾನೆಯ ಸಿಸ್ಟರ್ ಪ್ಲಾಂಟ್‌ನಿಂದ ತರಿಸಲಾಗಿದ್ದ ಭಾರೀ ತೂಕದ ಬಿಲ್ಲೆಟ್‌ಗಳನ್ನು ಕ್ರೇನ್ ಮೂಲಕ ಇಳಿಸುವಾಗ ಏಕಾಏಕಿ ಕ್ರೇನ್‌ನ ವೈರ್ ರೋಪ್ (ಕೇಬಲ್) ತುಂಡಾಗಿದೆ. ಈ ವೇಳೆ ಮೇಲಿದ್ದ ಬಿಲ್ಲೆಟ್ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿನೋದ್ ಕುಮಾರ್ ಅವರ ಎಡಗಾಲಿನ ಮೇಲೆ ಬಿದ್ದಿದೆ.
ಪರಿಣಾಮ ವಿನೋದ್ರ ಸೊಂಟದ ಭಾಗದಲ್ಲಿ ತೀವ್ರ ಪೆಟ್ಟಾಗಿ ವಿಪರೀತ ರಕ್ತಸ್ರಾವ ಉಂಟಾಗಿದೆ. ಗಾಯಾಳುವನ್ನು ಕೂಡಲೇ ಸ್ಥಳೀಯ ದುರ್ಗಾ ನರ್ಸಿಂಗ್ ಹೋಮ್‌ಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಅತಿಯಾದ ರಕ್ತಸ್ರಾವದ ಕಾರಣ ಆಸ್ಪತ್ರೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಪ್ರಸ್ತುತ ಮೃತದೇಹವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಶವಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಭದ್ರಾವತಿ ವಿಐಎಸ್‌ಎಲ್ ದುರ್ಘಟನೆ : ಸಂಘಟನೆಗಳು ಹೇಳೋದೇನು?
ಮೃತ ವಿನೋದ್ ಕುಮಾರ್ 2006 ಅಥವಾ 2007ನೇ ಇಸವಿಯಿಂದ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೂ ಗುತ್ತಿಗೆ ಕಾರ್ಮಿಕರ ಸಂಘದ ಮಾಜಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕಾರ್ಖಾನೆಯಲ್ಲಿನ ಎಲ್ಲಾ ಭಾರಿ ವಾಹನಗಳನ್ನು ಚಲಾಯಿಸುವಲ್ಲಿ ಪರಿಣತಿ ಹೊಂದಿದ್ದ ಇವರು ಅತ್ಯುತ್ತಮ ಕೆಲಸಗಾರರಾಗಿದ್ದರು ಎಂದು ಗುತ್ತಿಗೆ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ತಿಳಿಸಿದ್ದಾರೆ.
ಅಜಾತಶತ್ರುವಿನಂತಿದ್ದ ವಿನೋದ್ ಅವರ ಹಠಾತ್ ಸಾವಿನಿಂದ ಸಹೋದ್ಯೋಗಿಗಳಲ್ಲಿ ತೀವ್ರ ಆಘಾತ ಹಾಗೂ ಶೋಕ ಮಡುಗಟ್ಟಿದೆ. ಕೈಗಾರಿಕಾ ಕಾಯ್ದೆಯ ನಿಯಮಗಳ ಪ್ರಕಾರ, ಕರ್ತವ್ಯದ ಮೇಲಿದ್ದಾಗ ಮೃತಪಟ್ಟ ಕಾರ್ಮಿಕನ ಪತ್ನಿಗೆ ಆಡಳಿತ ಮಂಡಳಿಯು ಕಾಯಂ ಉದ್ಯೋಗ ನೀಡಬೇಕು
ರಾಕೇಶ್, ಗುತ್ತಿಗೆ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ
ಘಟನೆಯ ಮಾಹಿತಿ ತಿಳಿದ ಕೂಡಲೇ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕನ ಮೃತದೇಹದ ಅಂತಿಮ ದರ್ಶನ ಪಡೆದರು. ತೀವ್ರ ದುಃಖದಲ್ಲಿರುವ ಮೃತ ಕಾರ್ಮಿಕನ ಕುಟುಂಬಸ್ಥರು ಹಾಗೂ ಇತರ ನೌಕರರಿಗೆ ಅವರು ಸಾಂತ್ವನ ಹೇಳಿದರು. ಕೇಬಲ್ ತುಂಡಾಗಿ ನಡೆದ ಈ ಘಟನೆ ನಿಜಕ್ಕೂ ಅತ್ಯಂತ ದುರದೃಷ್ಟಕರ ಎಂದು ಸಂಸದರು ಕಂಬನಿ ಮಿಡಿದರು.
ಕಾರ್ಮಿಕರ ಬೇಡಿಕೆಯ ಬಗ್ಗೆ ಆಡಳಿತ ಮಂಡಳಿಯು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇಂದು ಆಡಳಿತ ಮಂಡಳಿ ಹಾಗೂ ಕಾರ್ಮಿಕ ಮುಖಂಡರ ನಡುವೆ ಮಾತುಕತೆ ನಿಗದಿಯಾಗಿದೆ. ಒಂದು ವೇಳೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕದಿದ್ದರೆ ಶವಸಂಸ್ಕಾರಕ್ಕೆ ಅವಕಾಶ ನೀಡದೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘವು ಎಚ್ಚರಿಕೆ ನೀಡಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
