ವನ್ಯಜೀವಿ ನಿರ್ವಹಣೆ ಮತ್ತು ಸಂರಕ್ಷಣಾ ಕ್ಷೇತ್ರದಲ್ಲಿ ಕೈಗೊಂಡ ಸಂಶೋಧನಾ ಕಾರ್ಯಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿ, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಹರ್ಷ ಪಿ.ಎಸ್. ಅವರಿಗೆ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ಡಿ) ಪದವಿಯನ್ನು ಪ್ರಕಟಿಸಿದೆ.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ಈ ಶೈಕ್ಷಣಿಕ ಸಾಧನೆಯನ್ನು ಅಧಿಕೃತವಾಗಿ ಅನುಮೋದಿಸಿದ್ದು, ಮುಂಬರುವ ಮೇ 06 ರಂದು ಜರುಗಲಿರುವ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಹರ್ಷ ಪಿ.ಎಸ್ ರಿಗೆ ವಿಧ್ಯುಕ್ತವಾಗಿ ಪಿಎಚ್ಡಿ ಪ್ರಮಾಣಪತ್ರ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಹರ್ಷ ಪಿ.ಎಸ್.
ಐಜಿಪಿ ಹರ್ಷ ಪಿ.ಎಸ್. ಅವರು ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು ಕೈಗೊಂಡಿದ್ದರು.
ಪ್ರಮುಖವಾಗಿ “ನಾಗರಹೊಳೆ, ಬಂಡೀಪುರ ಮತ್ತು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಒಂದು ಅಧ್ಯಯನ, ಮಾನವ-ಹುಲಿ ಸಂಘರ್ಷಕ್ಕೆ ವಿಶೇಷ ಉಲ್ಲೇಖದೊಂದಿಗೆ” ಎಂಬ ಮಹತ್ವದ ವಿಷಯದ ಕುರಿತು ಅವರು ತಮ್ಮ ವಿಸ್ತೃತ ಡಾಕ್ಟರೇಟ್ ಪ್ರಬಂಧವನ್ನು ಮೌಲ್ಯಮಾಪನಕ್ಕಾಗಿ ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು.
ಈ ಶೈಕ್ಷಣಿಕ ಸಂಶೋಧನಾ ಕಾರ್ಯಕ್ಕಾಗಿ ಅವರು ರಾಜ್ಯದ ಪ್ರಮುಖ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಕ್ಷೇತ್ರಕಾರ್ಯವನ್ನು ನಡೆಸಿದ್ದರು. ದಟ್ಟ ಅರಣ್ಯ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನ ಅಳವಡಿಸುವ ಮೂಲಕ ಹುಲಿಗಳ ಚಲನವಲನ ಹಾಗೂ ಅವುಗಳ ಸಂಖ್ಯೆಯ ಸ್ಥಿರತೆಯನ್ನು ವೈಜ್ಞಾನಿಕವಾಗಿ ದಾಖಲಿಸಿದ್ದಾರೆ.
ಇದರ ಜೊತೆಗೆ, ಕಾಡುಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಪದೇ ಪದೇ ಸಂಭವಿಸುತ್ತಿರುವ ಸಂಘರ್ಷದ ತಾಣಗಳಿಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿನ ಪರಿಸರ ಹಾಗೂ ನೈಸರ್ಗಿಕ ಅಂಶಗಳ ಕುರಿತು ವಿವರವಾದ ವಿಶ್ಲೇಷಣೆಯನ್ನು ತಮ್ಮ ಅಧ್ಯಯನ ವರದಿಯಲ್ಲಿ ಅಳವಡಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ವೃತ್ತಿಪರ ಜವಾಬ್ದಾರಿಗಳ ನಡುವೆಯೂ ವನ್ಯಜೀವಿ ಸಂರಕ್ಷಣೆಯಂತಹ ಸೂಕ್ಷ್ಮ ವಿಷಯದ ಬಗ್ಗೆ ಆಳವಾದ ಶೈಕ್ಷಣಿಕ ಸಂಶೋಧನೆ ನಡೆಸಿರುವುದು ಶೈಕ್ಷಣಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

