ವನ್ಯಜೀವಿ ವಿಚಾರದಲ್ಲಿ ಚಿಕ್ಕಮಗಳೂರಿನಲ್ಲಿ ಎರಡು ಪ್ರತ್ಯೇಕ ಘಟನೆ ನಡೆದಿದೆ. ಘಟನೆಯೊಂದರಲ್ಲಿ ಕಾಡು ಹಂದಿ ತಿವಿದು ವ್ಯಕ್ತಿಯೊಬ್ಬರು ಗಂಭೀರ ಆಗಿದ್ದಾರೆ. ಇನ್ನೊಂದೆಡೆ ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ.
ಕಾಡು ಹಂದಿ ದಾಳಿ, ಗಾಯ
ಕೊಪ್ಪ ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಂಚೂರು ಗ್ರಾಮದ ದೇವರಕೊಡಿಗೆಯಲ್ಲಿ ಕೃಷಿಕರೊಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿದ ಘಟನೆ ಭಾನುವಾರ ಬೆಳಿಗ್ಗೆ ವರದಿಯಾಗಿದೆ.
ದೇವರಕೊಡಿಗೆ ನಿವಾಸಿಯಾಗಿರುವ ಅನಿಲ್ ಕುಮಾರ್ ಎಂಬುವವರು ಬೆಳಿಗ್ಗೆ ತಮ್ಮ ಜಮೀನಿಗೆ ಕೆಲಸದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ಎದುರಾದ ಕಾಡು ಹಂದಿಯೊಂದು ಅವರಿಗೆ ತಿವಿದು ಗಾಯಗೊಳಿಸಿದೆ. ಘಟನೆ ನಡೆದ ತಕ್ಷಣವೇ ಗಾಯಾಳು ಅನಿಲ್ ಕುಮಾರ್ ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಅವರಿಗೆ ಹೆಚ್ಚಿನ ವೈದ್ಯಕೀಯ ನೆರವಿನ ಅವಶ್ಯಕತೆ ಇದ್ದು, ವೈದ್ಯರು ನೀಡುವ ಸಲಹೆಯ ಆಧಾರದ ಮೇಲೆ ಮುಂದಿನ ಚಿಕಿತ್ಸೆಯನ್ನು ಒದಗಿಸಲಾಗುವುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮೀನು ಹಿಡಿಯಲು ಹೋದವರು ನೀರುಪಾಲು
ಇನ್ನೊಂದೆಡೆ, ಅಲ್ಲೂರು ಸಮೀಪದ ಬಿಳಿಗಿರಿ ಎಸ್ಟೇಟ್ನ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದ್ದು, ಈ ಸಾವಿನ ಸುತ್ತ ಅನುಮಾನಗಳು ಸೃಷ್ಟಿಯಾಗಿವೆ.
ಮೃತಪಟ್ಟವರನ್ನು ಕೊಪ್ಪ ತಾಲ್ಲೂಕಿನ ಗಣಪತಿ ಕಟ್ಟೆ ಗ್ರಾಮದ ನಿವಾಸಿ ರಮೇಶ್ (27) ಹಾಗೂ ಕಡವಂತಿ ಗ್ರಾಮದ ನಿವಾಸಿ ಮಹೇಶ್ (39) ಎಂದು ಗುರುತಿಸಲಾಗಿದೆ. ರಮೇಶ್ ಅವರು ಅಗಳ ಗ್ರಾಮದ ಕಾಫಿ ಬೆಳೆಗಾರರಾದ ಬಿಳಿಯಪ್ಪ ಗೌಡ ಅವರಿಗೆ ಸೇರಿದ ಬಿಳಿಗಿರಿ ಎಸ್ಟೇಟ್ನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಅಂತೆಯೇ, ಮಹೇಶ್ ಅವರು ಕೂಡ ತಮ್ಮ ಕುಟುಂಬದೊಂದಿಗೆ ಇದೇ ಬಿಳಿಗಿರಿ ಎಸ್ಟೇಟ್ನಲ್ಲಿ ಕಳೆದ ಒಂದೂವರೆ ವರ್ಷದಿಂದ ಲೈನ್ ಮನೆಯಲ್ಲಿ ವಾಸವಿದ್ದು, ಕೂಲಿ ಕೆಲಸ ಮಾಡುತ್ತಿದ್ದರು.
ಶನಿವಾರ ರಮೇಶ್, ಮಹೇಶ್ ಹಾಗೂ ದಿವಾಕರ್ ಬಿಳಿಗಿರಿ ಎಸ್ಟೇಟ್ನ ಕೆರೆಯ ಬಳಿ ಮೀನು ಹಿಡಿಯುವ ಉದ್ದೇಶದಿಂದ ತೆರಳಿದ್ದರು. ಸ್ವಲ್ಪ ಸಮಯದ ನಂತರ ದಿವಾಕರ್ ಅವರು ತಾವು ಅಗಳ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಅಲ್ಲಿಂದ ನಿರ್ಗಮಿಸಿದ್ದರು. ತರುವಾಯ ವಾಪಸ್ ಬಂದು ನೋಡಿದಾಗ ರಮೇಶ್ ಮತ್ತು ಮಹೇಶ್ ಅವರು ಕಂಡುಬಂದಿಲ್ಲ. ಕೆರೆಯ ದಡದಲ್ಲಿ ಪರಿಶೀಲಿಸಿದಾಗ ರಮೇಶ್ ಅವರ ಚಪ್ಪಲಿ ಮಾತ್ರ ಪತ್ತೆಯಾಗಿತ್ತು. ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರೂ ಮೃತಪಟ್ಟಿರಬಹುದು ಎಂದು ಶಂಕಿಸಿ ರಮೇಶ್ ಅವರ ತಂದೆ ಕುಮಾರ ಆರಂಭದಲ್ಲಿ ದೂರು ನೀಡಿದ್ದರು.
ಘಟನೆ ಬಗ್ಗೆ ಹೆಚ್ಚಿದ ಅನುಮಾನ
ಆದರೆ, ಈ ಘಟನೆಯ ಬಗ್ಗೆ ಮಹೇಶ್ ಅವರ ಸಹೋದರ ಗಣೇಶ್ ಅವರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಮೀನು ಹಿಡಿಯಲು ತೆರಳಿದ್ದಾಗ ರಮೇಶ್ ಮತ್ತು ಮಹೇಶ್ ಅವರ ಜೊತೆಯಲ್ಲಿ ದಿವಾಕರ್ ಕೂಡ ಇದ್ದರು, ಹೀಗಾಗಿ ಅವರ ಮೇಲೆ ತಮಗೆ ಸಂಶಯವಿದ್ದು, ಆತನನ್ನು ಕೂಲಂಕಷವಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಅಲ್ಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಮೃತದೇಹಗಳನ್ನು ಕೆರೆಯಿಂದ ಹೊರತೆಗೆಯಲು ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಹೆನ್ಗಲ್ ಶೌರ್ಯ ಘಟಕದ ಮುಳುಗು ತಜ್ಞರಾದ ರಾಕೇಶ್ ಹಾಗೂ ಅಭಿಲಾಶ್ ಅವರು ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಶವಗಳನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
