Vishweshwar Bhat / ಕರಡಿ ಕಾಂಪೌಂಡ್ ಹಾರಿದ ವಿಚಾರಕ್ಕೆ ಚರ್ಚೆಯಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಇದೀಗ ಫೇಸ್ಬುಕ್ ಪೋಸ್ಟ್ ವೊಂದಕ್ಕೆ ಸದ್ದು ಮಾಡ್ತಿದೆಯಷ್ಟೆ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ನಮ್ಮೂರ ಏರ್ಫೋರ್ಟ್ ಪೋಸ್ಟ್ ಸಖತ್ ವೈರಲ್ ಟ್ರಾವೆಲ್ ಮಾಡುತ್ತಾ ಚರ್ಚೆ ಎಡೆಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಡಿಸ್ಕಶನ್ಗೆ ಕಾರಣವಾಗಿರುವ ಫೇಸ್ಬುಕ್ ಪೋಸ್ಟ್ ಹಾಕಿರೋದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ರವರು. ಆಗಾಗ ತಮ್ಮ ಪ್ರಯಾಣದ ರೋಚಕ ಸಂಗತಿಗಳನ್ನ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಹಂಚಿಕೊಳ್ಳುವ ಅವರು ನಿನ್ನೆ ಭಾನುವಾರ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದರು. ಆ ಪೋಸ್ಟ್ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಜೋರಾಗಿಯೇ ಬರೆದಿದ್ದಾರೆ. ಅವರು ಬರೆದ ವಿಚಾರ ಇದೀಗ ಸಖತ್ ಸೌಂಡ್ ಆಗುತ್ತಿದ್ದು, ಸ್ವತಃ ಸಂಸದ ಬಿವೈ ರಾಘವೇಂದ್ರ ಪೋಸ್ಟ್ ತಮ್ಮ ವಾಲ್ ನಲ್ಲಿ ಷೇರ್ ಮಾಡಿದ್ದಷ್ಟೆ ಅಲ್ಲದೆ, ಒಂದೊಳ್ಳೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ರಿಯಾಕ್ಷನ್ ಹೇಗಿತ್ತು ಎನ್ನುವುದಕ್ಕೂ ಮೊದಲು ವಿಶ್ವೇಶ್ವರ ಭಟ್ರವರ ಪೋಸ್ಟ್ನಲ್ಲಿ ಏನಿದೆ ಎಂಬುದನ್ನು ಮೊದಲು ಓದಿ ಬಿಡಿ

ವಿಶ್ವೇಶ್ವರ್ ಭಟ್ರವರ ಫೇಸ್ಬುಕ್ ಪೋಸ್ಟ್/ Vishweshwar Bhat
ನಾನು ಶನಿವಾರ ಶಿವಮೊಗ್ಗಕ್ಕೆ ರಸ್ತೆ ಮೂಲಕ ಹೋಗಬಹುದಿತ್ತು. ಆದರೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗಿ ಮೂರು ವರ್ಷಗಳಾದರೂ ಅಲ್ಲಿಗೆ ವಿಮಾನ ಮೂಲಕ ಹೋಗಿರಲಿಲ್ಲ. ಹೀಗಾಗಿ ಅಲ್ಲಿನ ವಿಮಾನ ನಿಲ್ದಾಣವನ್ನು ನೋಡುವ ಅವಕಾಶವೇ ಸಿಕ್ಕಿರಲಿಲ್ಲ. ಅದಕ್ಕಾಗಿಯೇ ಮೊನ್ನೆ ನರಸಿಂಹರಾಜಪುರಕ್ಕೆ ಹೋಗಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಹೋಗಿ ನಂತರ ಅಲ್ಲಿಂದ ರಸ್ತೆ ಮೂಲಕ ನರಸಿಂಹರಾಜಪುರಕ್ಕೆ ಹೋದೆ. ಶಿವಮೊಗ್ಗ ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಖಂಡಿತವಾಗಿಯೂ ಶಿವಮೊಗ್ಗಕ್ಕೊಂದು ವಿಮಾನ ನಿಲ್ದಾಣ ಬೇಕಿತ್ತು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರಿಂದ ಅತ್ಯುತ್ತಮ ಸ್ಪಂದನೆ ಸಿಗುತ್ತಿದೆಯಂತೆ. ಆರಂಭದಲ್ಲಿ ಕೇವಲ ಬೆಂಗಳೂರಿಗೆ ಮಾತ್ರ ವಿಮಾನಗಳಿದ್ದವು, ಆದರೆ ಈಗ ಇದರ ವ್ಯಾಪ್ತಿ ಮತ್ತು ಪ್ರಯಾಣಿಕರ ಸಂಖ್ಯೆ ಗಮನಾರ್ಹ ಹೆಚ್ಚಾಗಿದೆ.
ವಿಮಾನ ನಿಲ್ದಾಣವು ಉದ್ಘಾಟನೆಯಾದ (ಫೆಬ್ರವರಿ 2023) ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇಲ್ಲಿ ಸಂಚರಿಸಿದ್ದಾರಂತೆ. ನಿತ್ಯವೂ ಇನ್ನೂರರಿಂದ ಮುನ್ನೂರು ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಿದ್ದಾರೆ. ಒಂದು ಹಂತದಲ್ಲಂತೂ ಕೇವಲ ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ ದಾಖಲೆಯೂ ಇದೆ.
ಬೆಂಗಳೂರು – ಶಿವಮೊಗ್ಗ ಮಾರ್ಗಕ್ಕೆ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಉದ್ಯಮಿಗಳು, ರಾಜಕಾರಣಿಗಳು ಮತ್ತು ತುರ್ತು ಕೆಲಸಗಳಿಗಾಗಿ ಸಂಚರಿಸುವವರಿಗೆ ಇದು ತುಂಬಾ ಅನುಕೂಲಕರವಾಗಿದೆ. ಸ್ಟಾರ್ ಏರ್ ಮತ್ತು ಸ್ಪೈಸ್‌ಜೆಟ್ ಸಂಸ್ಥೆಗಳು ಹೈದರಾಬಾದ್, ಚೆನ್ನೈ, ಗೋವಾ ಮತ್ತು ತಿರುಪತಿಗೆ ವಿಮಾನ ಸೇವೆಗಳನ್ನು ಒದಗಿಸುತ್ತಿವೆ. ಈ ನಗರಗಳಿಗೂ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
ಪೈಲಟ್‌ಗಳ ಕೊರತೆಯಿಂದಾಗಿ ಇಂಡಿಗೋ ಸಂಸ್ಥೆಯು ಮೇ ತಿಂಗಳಿನಿಂದ ಬೆಂಗಳೂರು-ಶಿವಮೊಗ್ಗ ಮಾರ್ಗದ ಸೇವೆಯನ್ನು ತಾತ್ಕಾಲಿಕವಾಗಿ (ಸುಮಾರು 3 ತಿಂಗಳು) ಸ್ಥಗಿತಗೊಳಿಸಲು ನಿರ್ಧರಿಸಿದೆಯಂತೆ. ಆದರೆ ಇದಕ್ಕೆ ಭಾರಿ ಬೇಡಿಕೆಯಿರುವುದರಿಂದ ಜನಪ್ರತಿನಿಧಿಗಳು ಮತ್ತು ಸಚಿವರು ವಿಮಾನಯಾನ ಮುಂದುವರಿಸಲು ಒತ್ತಾಯಿಸುತ್ತಿದ್ದಾರೆ.
ರಾತ್ರಿ ವೇಳೆ ವಿಮಾನಗಳ ಸಂಚಾರಕ್ಕೆ ಇದ್ದ ಅಡಚಣೆಯನ್ನು ನಿವಾರಿಸಲು ಈಗ ನೈಟ್ ಲ್ಯಾಂಡಿಂಗ್ ನ್ಯಾವಿಗೇಶನ್ ಸಿಸ್ಟಮ್ ಅಳವಡಿಸಲಾಗುತ್ತಿದೆ. ಇದು ಪೂರ್ಣಗೊಂಡರೆ ಹವಾಮಾನ ವೈಪರೀತ್ಯದ ಸಮಯದಲ್ಲೂ ವಿಮಾನಗಳು ಸುಲಭವಾಗಿ ಇಳಿಯಬಹುದು, ಇದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ಮಿಸಿದ ಗುತ್ತಿಗೆದಾರರಾದ ತೀರ್ಥಹಳ್ಳಿಯ ಇಬ್ರಾಹಿಂ ಷರೀಫ್ ಅವರ ಜತೆ ಕೆಲ ಹೊತ್ತು ಮಾತಾಡುವ ಅವಕಾಶ ಸಿಕ್ಕಿತ್ತು. ಆ ವಿಮಾನ ನಿಲ್ದಾಣ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳನ್ನು ಅವರು ಮನವರಿಕೆ ಮಾಡಿಕೊಟ್ಟರು.
ಪ್ರಯಾಣಿಕರ ಒತ್ತಡವನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಮುಂಬೈ ಮತ್ತು ದೆಹಲಿಯಂಥ ಪ್ರಮುಖ ನಗರಗಳಿಗೂ ನೇರ ವಿಮಾನ ಸಂಪರ್ಕ ಕಲ್ಪಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಜತೆಗೆ ಅಲ್ಲಿ ವಿಮಾನ ತರಬೇತಿ ಕೇಂದ್ರ ಮತ್ತು ವಿಮಾನಗಳ ದುರಸ್ತಿ ಕೇಂದ್ರ ಆರಂಭಿಸುವ ಯೋಜನೆ ಕೂಡ ಇದೆ.
ಶಿವಮೊಗ್ಗ ವಿಮಾನ ನಿಲ್ದಾಣವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ರಾಜ್ಯದ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಈ ವಿಮಾನ ನಿಲ್ದಾಣವು ನಿಜಕ್ಕೂ ಒಂದು ‘ಗೇಮ್ ಚೇಂಜರ್ ಆಗಬಹುದು.

ಈ ಪೋಸ್ಟ್ಗೆ ಸಂಸದ ಬಿವೈ ರಾಘವೇಂದ್ರರವರು ವಿಶ್ವೇಶ್ವರ ಭಟ್ (Vishweshwar Bhat) ಅವರಂತಹ ಪ್ರತಿಷ್ಠಿತ ಪತ್ರಕರ್ತರು ಶಿವಮೊಗ್ಗ ವಿಮಾನ ನಿಲ್ದಾಣದ ಯಶಸ್ಸು ಮತ್ತು ಸಾಮರ್ಥ್ಯವನ್ನು ಗುರುತಸಿರುವುದು ನಿಜಕ್ಕೂ ಸಂತೋಷಕರ.ಈ ಪರಿವರ್ತನಾತ್ಮಕ ಮೂಲಸೌಕರ್ಯವು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಿರತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.ನಮ್ಮ ಪ್ರದೇಶಕ್ಕೆ ಈ ವಿಮಾನ ನಿಲ್ದಾಣದ ಅಗಾಧ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಂಪರ್ಕವನ್ನು ಹೆಚ್ಚಿಸಲು, ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಲು ಮತ್ತು ಹಗಲು ರಾತ್ರಿ ಕಾರ್ಯಾಚರಣೆಗಳನ್ನು ವಿಸ್ತರಿಸಲು ನಾವು ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಅಂಥಾ ಬರೆದುಕೊಂಡಿದ್ದಾರೆ. ಸದ್ಯ ಈ ಇಬ್ಬರು ಗಣ್ಯರ ಶಿವಮೊಗ್ಗ ವಿಮಾನ ನಿಲ್ದಾಣದ ಸಮಾಚಾರ, ಉಳಿದ ಸೋಶಿಯಲ್ ಮೀಡಿಯಾಗಳಲ್ಲಿಯು ಹಂಚಿಕೆಯಾಗ್ತಿದೆ ಹಾಗೂ ಒಂದಿಷ್ಟು ಹಾಗೀಗೆ ಚರ್ಚೆಯಾಗುತ್ತಿದೆ.
ಶಿವಮೊಗ್ಗ: ನಾರಾಯಣ ಹೆಲ್ತ್‌ನಿಂದ ಹೆಲ್ಲಿ ಕಿಡ್ಸ್ ಗೇಟ್‌ವೇ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.