ಶಿವಮೊಗ್ಗ : ಶಿವಮೊಗ್ಗ ನಗರ ಇಂದು ಸಂಪೂರ್ಣ ಬಣ್ಣದೋಕುಳಿಯಲ್ಲಿ ಮಿಂದೆದ್ದಿತು. ಯುವಕ-ಯುವತಿಯರಿಂದ ಹಿಡಿದು ಹಿರಿಯರವರೆಗೆ ಎಲ್ಲಾ ವರ್ಗದ ಜನರು ಪರಸ್ಪರ ಬಣ್ಣ ಬಳಿದುಕೊಂಡು, ತಮ್ಮ ಕಷ್ಟ-ನೋವುಗಳನ್ನೆಲ್ಲಾ ಮರೆತು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಈ ಸಂಭ್ರಮಕ್ಕೆ ಸಾಕ್ಯಿಯಾಗಿದ್ದು ನಗರದ ಗೋಪಿ ವೃತ್ತದಲ್ಲಿ ಆಯೋಜಿಸಿದ್ದ ಹೋಳಿ ಹಬ್ಬದ ಆಚರಣೆ.
ಶಿವಮೊಗ್ಗ: ವಿದ್ಯಾರ್ಥಿ ಸಂಕೇತ್ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ
ಹೌದು ಪ್ರತಿ ವರ್ಷದಂತೆ ಈ ಬಾರಿಯೂ ಸಹ ಹಿಂದೂ ಕೇಸರಿ ಅಲಂಕಾರ್ ಸಮಿತಿ ವತಿಯಿಂದ ರೇನ್ ಡ್ಯಾನ್ಸ್ ಹಾಗೂ ಡಿಜೆ ಮ್ಯೂಸಿಕ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಈ ಆಚರಣೆಯಲ್ಲಿ ಸಾವಿರಾರು ಯುವಕ-ಯುವತಿಯರು ಪಾಲ್ಗೊಂಡಿದ್ದರು. ರಸ್ತೆಯ ಮಧ್ಯದಲ್ಲಿಯೇ ರೇನ್ ಡ್ಯಾನ್ಸ್ ಹಾಗೂ ಡಿಜೆ ವ್ಯವಸ್ಥೆ ಮಾಡಿದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಕಲ್ಪಿಸಲಾಗಿತ್ತು. ಪೈಪ್‌ಗಳ ಮೂಲಕ ಶವರ್ ಮಾದರಿಯಲ್ಲಿ ಸುರಿಯುತ್ತಿದ್ದ ನೀರಿಗೆ ಬಣ್ಣ ಬಳಿದುಕೊಂಡು ಸಾವಿರಾರು ಜನ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದರು. ಕೇವಲ ಸಾರ್ವಜನಿಕರಷ್ಟೇ ಅಲ್ಲದೆ, ರಾಜಕೀಯ ಮುಖಂಡರು ಸಹ ಸಾಮಾನ್ಯರಂತೆ ಜನರೊಡನೆ ಬೆರೆತು ಕುಣಿದಿದ್ದು ವಿಶೇಷವಾಗಿತ್ತು.

ಶಾಸಕ ಎಸ್.ಎನ್. ಚೆನ್ನಬಸಪ್ಪ ಅವರ ಜಬರ್ದಸ್ತ್ ಡ್ಯಾನ್ಸ್
ಈ ಹೋಳಿ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚೆನ್ನಬಸಪ್ಪ ಅವರ ಡ್ಯಾನ್ಸ್. ಸಾಮಾನ್ಯರಂತೆ ಮೈತುಂಬ ಬಣ್ಣ ಹಚ್ಚಿಕೊಂಡು ಸಾರ್ವಜನಿಕರೊಡನೆ ಬೆರೆತ ಶಾಸಕರು, ಹಿಂದಿಯ ಪ್ರಸಿದ್ಧ ನಾಗಿನ್ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು. ಅವರ ಲವಲವಿಕೆಯ ಡ್ಯಾನ್ಸ್ ನೆರೆದಿದ್ದವರ ಹುಬ್ಬೇರಿಸುವಂತೆ ಮಾಡಿತ್ತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಶಿವಮೊಗ್ಗದಲ್ಲಿ ಎಂದಿನಂತೆ ಈ ಬಾರಿಯೂ ಹಿಂದೂ ಕೇಸರಿ ಅಲಂಕಾರ್ ಸಮಿತಿಯಿಂದ ಅತ್ಯಂತ ವ್ಯವಸ್ಥಿತವಾಗಿ ಹೋಳಿ ಆಯೋಜಿಸಲಾಗಿದೆ. ಸಮಸ್ತ ಹಿಂದೂ ಬಾಂಧವರು ಸಡಗರದಿಂದ ಹಬ್ಬ ಆಚರಿಸುತ್ತಿದ್ದಾರೆ. ಪೊಲೀಸರು ಕೂಡ ಉತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ. ಎಲ್ಲರಿಗೂ ಕಾಮನಹಬ್ಬದ ಹಾರ್ದಿಕ ಶುಭಾಶಯಗಳು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ಮಾತನಾಡಿ, ಹೋಳಿ ಎಂಬುದು ನಮ್ಮ ಸಂಸ್ಕೃತಿಯ ಸಂಕೇತ. ನಾವು ಪ್ರತಿ ವರ್ಷದಂತೆ ಈ ವರ್ಷವೂ ಗೋಪಿ ವೃತ್ತಕ್ಕೆ ಬಂದಿದ್ದೇವೆ. ಇಲ್ಲಿ ವಯಸ್ಸಿನ ಮಿತಿಯಿಲ್ಲದೆ ಕುಟುಂಬದವರೆಲ್ಲರೂ ಮುಕ್ತವಾಗಿ ಭಾಗವಹಿಸಬಹುದು. ಸುರಕ್ಷಿತವಾದ ಪರಿಸರ ಇರುವುದರಿಂದ ಯಾವುದೇ ಕಿರಿಕಿರಿ ಇಲ್ಲದೆ ಎಷ್ಟು ಹೊತ್ತಾದರೂ ಮನರಂಜನೆ ಪಡೆಯಬಹುದು ಎಂದು ತಮ್ಮ ಸಂತಸ ಹಂಚಿಕೊಂಡರು.
ಶಿವಮೊಗ್ಗದ ಹೋಳಿ ಆಚರಣೆಯು ಕೇವಲ ಬಣ್ಣಗಳ ಹಬ್ಬವಾಗಿಯಷ್ಟೇ ಉಳಿಯದೆ, ಜಾತಿ-ಮತ ಮತ್ತು ಅಂತಸ್ತುಗಳ ಬೇಧವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಎತ್ತಿಹಿಡಿಯಿತು. ಶಾಸಕರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಒಂದೇ ಬಣ್ಣದಲ್ಲಿ ಮಿಂದು ಸಂಭ್ರಮಿಸಿದ್ದು, ನಗರದ ಸಾಮರಸ್ಯ ಮತ್ತು ಸೌಹಾರ್ದತೆಗೆ ಹಿಡಿದ ಕೈಗನ್ನಡಿಯಂತಿದೆ. ಕಿಕ್ಕಿರಿದು ಸೇರಿದ ಜನಸಂದಣಿಯ ನಡುವೆಯೂ ಶಾಂತಿಯುತವಾಗಿ ಸಡಗರದ ಈ ಆಚರಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.
Shivamogga Celebrates Holi With Grandeur At Gopi Circle
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
