ipl : ಮುಂಗಾರು ಮಳೆಯಲ್ಲಿ ಮಿಂದೆದ್ದ “ಪ್ರೀತಿ”ಯ ಮನದ ಕಡಲು..! 

This Article Written by / Prathapa thirthahalli / ಜೂನ್ 2, 2025

ipl ಫೈನಲ್​ಗೆ ಲಗ್ಗೆಯಿಟ್ಟ ಕಿಂಗ್ಸ್​​

ipl : ಮುಂಗಾರು ಮಳೆಯಲ್ಲಿ ಮಿಂದೆದ್ದ “ಪ್ರೀತಿ”ಯ ಮನದ ಕಡಲು..! 

ಆತ ಮುಖೇಶ್ ಅಂಬಾನಿಯ ಸಾಮ್ರಾಜ್ಯವನ್ನೇ ತಲ್ಲಣಗೊಳಿಸಿದ.. ನೀತಾ ಅಂಬಾನಿಯ ಹೃದಯವನ್ನೇ ಘಾಸಿಗೊಳಿಸಿ ಕಣ್ಣಲ್ಲಿ ನೀರು ಸುರಿಸಿದ..ಮೈದಾನದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ತಲೆಚಚ್ಚಿಕೊಳ್ಳುವಂತೆ ಮಾಡಿದ.. ಒಂದು ಮಹೋನ್ನತ ಇನಿಂಗ್ಸ್ ಮೂಲಕ ಐದು ಬಾರಿಯ ಚಾಂಪಿಯನ್ ತಂಡಕ್ಕೆ ಮರ್ಮಾಘಾತ ನೀಡಿದ…11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‍ಗೇರಿಸಿದ.. 200 ಪ್ಲಸ್ ರನ್ ಹೊಡೆದು ಗೆಲುವು ನಮ್ಮದೇ ಎಂದು ಬೀಗುತ್ತಿದ್ದ  ತಂಡಕ್ಕೆ ಮೊದಲ ಬಾರಿ ಸೋಲಿನ ರುಚಿ ತೋರಿಸಿದ…ಅಷ್ಟೇ ಅಲ್ಲ, ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಕನಸುಗಳನ್ನು ನುಚ್ಚುನೂರುಗೊಳಿಸಿದ.. ಮಂಗಳೂರು ನೀರು ದೋಸೆಯಂತೆ ಸುಯ್ಯನೇ ರನ್ ಹೊಡೆದು ತಂಡವನ್ನು ಗೆಲ್ಲಿಸಿದ.. ಪಾವ್ ಬಾಜಿ ಮುಂದೆ ನೀರುದೋಸೆನೇ ಬೆಸ್ಟ್ ಅಂತ ಸಾಬೀತುಪಡಿಸಿದ…! ಹೌದು, ಶ್ರೇಯಸ್ ಅಯ್ಯರ್ ನೋಡೋಕೆ ಸೈಲೆಂಟ್ ಕಿಲ್ಲರ್.. ಬ್ಯಾಟಿಂಗ್‍ನಲ್ಲಿ ಕ್ಲಾಸ್ ಆಂಡ್ ಮಾಸ್ ಪ್ಲೇಯರ್… ಕೂಲ್ ಆಗಿಯೇ ಪಂದ್ಯ ಗೆಲ್ಲಬಹುದು ಎಂದು ಅರಿತಿರುವ ಮ್ಯಾಚ್ ವಿನ್ನರ್.. ಅಂದ ಮೇಲೆ ಯಾವುದೇ ಸಂದೇಹವಿಲ್ಲದೇ ಹೇಳಬಹುದು ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್‍ನ ಸೂಪರ್ ಸ್ಟಾರ್. 

ipl ಫೈನಲ್​ಗೆ ಲಗ್ಗೆಯಿಟ್ಟ ಕಿಂಗ್ಸ್​​
ipl ಫೈನಲ್​ಗೆ ಲಗ್ಗೆಯಿಟ್ಟ ಕಿಂಗ್ಸ್​​

ipl : ಅದಕ್ಕೆ ಕಾರಣವೂ ಇದೆ. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‍ಗೇರಿಸಿದ್ರೂ ಮುಂದಿನ ದಿನಗಳಲ್ಲಿ ತಂಡದಿಂದ ಹೊರನಡೆದ. 2024ರಲ್ಲಿ ನಾಯಕನಾಗಿ ಕೆಕೆಆರ್​​ಗೆ ಪ್ರಶಸ್ತಿ ತಂದುಕೊಟ್ರೂ ಅಲ್ಲಿ ಕೂಡ  ಬೇಡವಾದ..2025ರಲ್ಲಿ ಅವರನ್ನು ಬಿಟ್ಟು ಇವರು ಅಂತ ಹುಡುಕಾಟದಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡದ ಕಣ್ಣಿಗೆ ಬಿದ್ದ. ಹಾಗೇ, ಹೆಡ್ ಕೋಚ್ ರಿಕಿ ಪಾಂಟಿಂಗ್, ಅಯ್ಯರ್‍ನ ಸಾಮಥ್ರ್ಯವನ್ನು ಚೆನ್ನಾಗಿ ಅರಿತಿದ್ದ. ಇದೀಗ ನಾಯಕನಾಗಿ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾನೆ ಶ್ರೇಯಸ್ ಅಯ್ಯರ್.      

ಅಂದ ಹಾಗೇ, ಶ್ರೇಯಸ್ ಅಯ್ಯರ್ ತನ್ನ ಬ್ಯಾಟ್‍ನಿಂದ ಹಲವರಿಗೆ ಮುಟ್ಟಿನೋಡಿಕೊಳ್ಳುವಂತೆ ಹೊಡೆದ. ಟೆಸ್ಟ್ ಕ್ರಿಕೆಟ್‍ನಲ್ಲಿ ರೂಮ್ ಇಲ್ಲ ಅಂತ ಹೇಳಿದ್ದ ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜೀತ್ ಅರ್ಗಕರ್​​ನ ಬಾಯಿ ಮುಚ್ಚಿಸಿದ. ತನ್ನನ್ನು ಯಾಕೆ ಆಯ್ಕೆ ಮಾಡಿಲ್ಲ ಅಂತ ಆಯ್ಕೆ ಸಮಿತಿಯನ್ನೇ ಕೇಳಿ ಎಂದು ಹೇಳಿದ್ದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್​​ಗೆ ಮುಖಕ್ಕೆ ಹೊಡೆದಂಗೆ ಆಡಿದ.. ಪಂಜಾಬ್ ಪ್ರಶಸ್ತಿ ಗೆದ್ರೂ ಗೆಲ್ಲದಿದ್ರೂ ರೊಚ್ಚಿಗೆದ್ದ ಅಯ್ಯರ್ ಮಾತ್ರ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನೇ ನೀಡಿದ.. ನಿರ್ಣಾಯಕ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಪಂಜಾಬ್ ತಂಡದ ಅದೃಷ್ಟದ ಬಾಗಿಲನ್ನೇ ತೆರೆದ.. ನಗುಮುಖದ ರಾಣಿ ಪ್ರೀತಿ ಝಿಂಟಾಳ ಮುಖದಲ್ಲಿ ಮಂದಹಾಸ ಮೂಡಿಸಿದ.

ipl : ಗೇಮ್​ ಪ್ಲಾನ್​ ವಿಚಾರದಲ್ಲಿ ರಿಕಿ ಪಾಂಟಿಂಗ್​ ಪಂಟರ್​

ಪಾಪ ಆ  ಸುಂದ್ರಿ ಕಳೆದ 18 ವರ್ಷಗಳಿಂದ ಐಪಿಎಲ್‍ನ ಒಂದೇ ಒಂದು ಪಂದ್ಯವನ್ನು ಮಿಸ್ ಮಾಡಿಕೊಂಡಿಲ್ಲ. ತಂಡ ಸೋಲಲಿ, ಗೆಲ್ಲಲಿ..ಯಾವತ್ತೂ ಬೇಜಾರು ತೋರಿಸಿಕೊಂಡಿಲ್ಲ. ಒಂದು ಬಾರಿ ಪ್ರಶಸ್ತಿ ಹಂತಕ್ಕೆ ಬಂದು ಕೈ ಜಾರಿ ಹೋದ್ರೂ ಕಣ್ಣೀರು ಸುರಿಸಲಿಲ್ಲ.. ನಗುಮುಖದ ಡಿಂಪಲ್ ರಾಣಿಯ ಕ್ರೀಡಾ ಸ್ಪೂರ್ತಿಯ ಮುಂದೆ ಯಾವ ಐಪಿಎಲ್ ಫ್ರಾಂಚೈಸಿ ಮಾಲೀಕರು ಸನೀಹಕ್ಕೂ ಬರಲ್ಲ…ಇದೀಗ 2ನೇ ಬಾರಿ ಪ್ರಶಸ್ತಿ ಹಂತಕ್ಕೆ ತಲುಪಿರುವ ಪಂಜಾಬ್ ತಂಡದ ಹಣೆಬರೆಹ ಏನು ಆಗುತ್ತೆ ಅನ್ನೋದು ಗೊತ್ತಿಲ್ಲ.. ಆದ್ರೆ ಈ ಬಾರಿ ಪ್ರೀತಿ ಝಿಂಟಾ ಖುಷಿಗೆ ಇತಿಮಿತಿಯೇ ಇಲ್ಲ. 

ಹಾಗೇ ನೋಡಿದ್ರೆ ಐಪಿಎಲ್‍ನಲ್ಲಿ ಪಂಜಾಬ್ ತಂಡವನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ. ತಂಡದಲ್ಲಿ ಸ್ಟಾರ್ ಆಟಗಾರರು ಇದ್ರೂ ಲೆಕ್ಕಕ್ಕೆ ಬರುತ್ತಿರಲಿಲ್ಲ. ಪಂಜಾಬ್ ತಂಡ ಅಂದ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದ್ರೆ ಈ ಬಾರಿ ಹಾಗೇ ಆಗಲಿಲ್ಲ. ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಸುಮ್ಮನೇ ಕೂರಲಿಲ್ಲ. ತಂಡದಲ್ಲಿ ಸೂಪರ್ ಸ್ಟಾರ್ ಅಂತ ಹೇಳಿಕೊಳ್ಳುವ ಆಟಗಾರರು ಇರಲಿಲ್ಲ. ಆದ್ರೂ ಪಾಂಟಿಂಗ್ ತನ್ನ ಹಠವನ್ನು ಬಿಟ್ಟುಕೊಡಲಿಲ್ಲ. ದೆಹಲಿ ತಂಡದ ಕೋಚ್ ಆಗಿ ಪಾಂಟಿಂಗ್ ಅದ್ಭುತ ಸಾಧನೆ ಏನು ಮಾಡಿರಲಿಲ್ಲ. ಆದ್ರೂ ದೆಹಲಿ ಹಾಗೂ ಕೆಕೆಆರ್ ತಂಡದ ಮಾಜಿ ನಾಯಕನನ್ನೇ ಪಂಜಾಬ್ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡುವಲ್ಲಿ ಪಾಂಟಿಂಗ್ ಪಾತ್ರ ಇಲ್ಲ ಎಂದು ಹೇಳುವ  ಹಾಗಿಲ್ಲ. ಯಾಕಂದ್ರೆ ಗೇಮ್ ಪ್ಲಾನ್ ವಿಚಾರದಲ್ಲಿ ಪಾಂಟಿಂಗ್ ಪಂಟರ್ ಎಂಬುದು ಕೂಡ ಸುಳ್ಳಲ್ಲ. ಒಂದು ಸಾಮಾನ್ಯ ತಂಡವಾಗಿರುವ ಪಂಜಾಬ್ ತಂಡವನ್ನು ಅಸಾಮಾನ್ಯ ತಂಡವಾಗಿ ರೂಪುಗೊಳಿಸುವಲ್ಲಿ ಪಾಂಟಿಂಗ್ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. 

ipl :  ಇದೀಗ 2025ರ ಐಪಿಎಲ್ ಫೈನಲ್‍ನಲ್ಲಿ ಎರಡು ನತದೃಷ್ಟ  ತಂಡಗಳು ಫೈಟ್ ನಡೆಸಲಿವೆ. ಹಾಗೇ ನೋಡಿದ್ರೆ ಪಂಜಾಬ್‍ಗಿಂತ ಆರ್ ಸಿ ಬಿ ಹೆಚ್ಚು ನತದೃಷ್ಟ ತಂಡ. ಈ ಹಿಂದೆ  ಮೂರು ಬಾರಿ ಫೈನಲ್‍ಗೆ ಬಂದ್ರೂ ಪ್ರಶಸ್ತಿ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದು ಅಲ್ಲದೇ ಪ್ರತಿ ಬಾರಿಯೂ ಐಪಿಎಲ್‍ನಲ್ಲಿ ಆರ್​ಸಿಬಿ ತಂಡ ಗೆಲ್ಲುವ ಫೆವರೀಟ್ ತಂಡವಾಗಿರುತ್ತಿತ್ತು. ಒಂದು ರೀತಿಯಲ್ಲಿ ಆರ್ ಸಿ ಬಿ ವಿಶ್ವ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾಗಿರುವ ಪರಿಸ್ಥಿತಿಯಲ್ಲೇ ಆಡುತ್ತಿತ್ತು. ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಆರ್​ಸಿಬಿ ತಂಡಕ್ಕೆ ಎದುರಾಳಿ ತಂಡಕ್ಕಿಂತ ಅಭಿಮಾನಿಗಳ ಒತ್ತಡವೇ ಜಾಸ್ತಿ ಇರುತ್ತಿತ್ತು. ಆದ್ರೆ ಪಂಜಾಬ್ ತಂಡ ಒಂಥರಾ ನ್ಯೂಜಿಲೆಂಡ್ ತಂಡದ ಹಾಗೇ. ಗೆಲ್ಲುವ ಪಂದ್ಯಗಳನ್ನು ಕೈ ಚೆಲ್ಲಿಕೊಳ್ಳುವುದು ಪಂಜಾಬ್ ತಂಡಕ್ಕೆ ಐಪಿಎಲ್‍ನಲ್ಲಿ ಮಾಮೂಲಿಯಾಗಿಬಿಟ್ಟಿತ್ತು. ಆದ್ರೆ ಆಸ್ಟ್ರೇಲಿಯಾ ರೀತಿ ಬಿಗ್ ಮ್ಯಾಚ್ ವಿನ್ನರ್ಸ್ ಖ್ಯಾತಿಯ ಸಿಎಸ್‍ಕೆ ಮಕಾಡೆ ಮಲಗಿದೆ. ಇನ್ನೂ ಪ್ಲೇ ಆಫ್‍ಗೆ ಎಂಟ್ರಿ ಕೊಟ್ಟ ಮೇಲೆ ಪ್ರಶಸ್ತಿ ನಮ್ದೇ ಎಂದು ಬೀಗುತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಅದೃಷ್ಟದ ಲೆಕ್ಕಚಾರವೂ ಬುಡಮೇಲು ಆಗಿದೆ.

ಸದ್ಯ ಎಲ್ಲರ ಚಿತ್ತ ಐಪಿಎಲ್ ಫೈನಲ್‍ನತ್ತ. ಆರ್​ಸಿಬಿ ಮತ್ತು ಪಿಬಿಕೆಎಸ್ ನಡುವಿನ ರೋಚಕ ಹೋರಾಟ..ಜೂನ್ 3.. ಕಾದು ನೋಡೋಣ..!ipl

 

ಸನತ್ ರೈ, ಹಿರಿಯ ಪತ್ರಕರ್ತರು

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ

Leave a Comment