ತ್ರಾಸಿಯಲ್ಲಿ ಬಸ್ ಅಪಘಾತ: ಶಿವಮೊಗ್ಗದ ಶಂಕರಘಟ್ಟದ ವಿದ್ಯಾರ್ಥಿಗಳು ಸೇಫ್, ತಪ್ಪಿದ ಭಾರೀ ಅನಾಹುತ #shivamogga

ಹಂಚಿಕೊಳ್ಳಿ
WhatsApp Facebook X Telegram
ತ್ರಾಸಿಯಲ್ಲಿ ಬಸ್ ಅಪಘಾತ: ಶಿವಮೊಗ್ಗದ ಶಂಕರಘಟ್ಟದ ವಿದ್ಯಾರ್ಥಿಗಳು ಸೇಫ್, ತಪ್ಪಿದ ಭಾರೀ ಅನಾಹುತ #shivamogga

ತ್ರಾಸಿಯಲ್ಲಿ ಬಸ್ ಅಪಘಾತ: ಶಿವಮೊಗ್ಗದ ಶಂಕರಘಟ್ಟದ ವಿದ್ಯಾರ್ಥಿಗಳು ಸೇಫ್, ತಪ್ಪಿದ ಭಾರೀ ಅನಾಹುತ

ಮಲೆನಾಡು ಟುಡೆ ಸುದ್ದಿ / ಉಡುಪಿ / ಬೈಂದೂರು ತಾಲೂಕಿನ ತ್ರಾಸಿ ಬೀಚ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಮೊಗ್ಗದ ಪ್ರವಾಸಿಗರಿದ್ದ ಬಸ್ ರಸ್ತೆ ಬದಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಬಸ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಪ್ರಾಥಮಿಕ ಮಾಹಿತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಕಾಲೇಜಿನ ಆಡಳಿತ ಮಂಡಳಿಯು ಈ ಸುದ್ದಿಯನ್ನು ತಳ್ಳಿಹಾಕಿದ್ದು, ಬಸ್ಸಿನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಕಳೆದ ಸೋಮವಾರದಂದು ರಂಭಾಪುರಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ನ ಸುಮಾರು 47 ವಿದ್ಯಾರ್ಥಿಗಳು, ಸಲ್ಮಾ, ಇರ್ಫಾನ್, ವಾಣಿ ಸೇರಿದಂತೆ ನಾಲ್ವರು ಶಿಕ್ಷಕರು ಹಾಗೂ ಅಡುಗೆಯವರೊಂದಿಗೆ ಕರಾವಳಿ ಪ್ರವಾಸಕ್ಕೆ ತೆರಳಿದ್ದರು. ಮೂರು ದಿನಗಳ ಪ್ರವಾಸವನ್ನು ಮುಗಿಸಿ ಮುರುಡೇಶ್ವರದಿಂದ ಉಡುಪಿಯತ್ತ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಅತಿ ವೇಗದಿಂದ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಹಿಂದಿನಿಂದ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಮುಖರಾದ ಕನ್ನಡ ಪ್ರೊಫೆಸರ್ ವಸಂತ್​​ ಕುಮಾರ್​ರವರು ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಶಿಕ್ಷಕರೊಬ್ಬರ ಮಗುವಿನ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದಂತೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ. ಆದರೆ, ಬಸ್ಸಿನ ಚಾಲಕ ಹಾಗೂ ಕ್ಲೀನರ್ ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಸ್ಥಳೀಯರದ್ದೇ ಆದ ಹಳೆಯ ಬಸ್ ಒಂದನ್ನು ಮಾಡಿಕೊಂಡು ಪ್ರವಾಸಕ್ಕೆ ಹೋಗಿದ್ದರು, ಆ ಬಸ್ಸಿನ ಸ್ಥಿತಿಗತಿಯ ಬಗ್ಗೆ ನಮಗೆ ಮೊದಲೇ ಅನುಮಾನವಿತ್ತು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಹಾಗೂ ಹೆದ್ದಾರಿ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿ ಗಾಯಾಳುಗಳನ್ನು ಬಸ್ಸಿನಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ಹಾಗೂ ಕ್ಲೀನರ್‌ಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಅತಿ ವೇಗವೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

#UdupiAccident #TrasiBeach #ShivamoggaStudents #RambhapuriCollege #Kundapura #KarnatakaNews #MalenaduToday #ShivamoggaNews

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor