ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ದ ಸಾಧನೆ ದೊಡ್ಡದಿದೆ. ಜಿಲ್ಲೆಯು ಶೇಕಡಾ 96.56 ರಷ್ಟು ಉತ್ತೀರ್ಣತೆಯೊಂದಿಗೆ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನವನ್ನ ತನ್ನದಾಗಿಸಿಕೊಂಡಿದೆ. ನೋಂದಾಯಿಸಿಕೊಂಡಿದ್ದ 21,692 ವಿದ್ಯಾರ್ಥಿಗಳ ಪೈಕಿ 20,946 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನೂ ತೀರ್ಥಹಳ್ಳಿಯ ವಿದ್ಯಾರ್ಥಿನಿ ಸ್ಟೇಟ್ಗೆ ಸೆಕೆಂಡ್ ರ್ಯಾಂಕ್ ಬಂದಿದ್ದಾಳೆ . ಎಸ್‌ಎಸ್‌ಎಲ್‌ಸಿ ಫಲಿತಾಂಶ : ವಾಗ್ದೇವಿ ಇಂಗ್ಲಿಷ್ ಪ್ರೌಢಶಾಲೆಯ ವಿದ್ಯಾರ್ಥಿನಿ…
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ದ ಸಾಧನೆ ದೊಡ್ಡದಿದೆ. ಜಿಲ್ಲೆಯು ಶೇಕಡಾ 96.56 ರಷ್ಟು ಉತ್ತೀರ್ಣತೆಯೊಂದಿಗೆ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನವನ್ನ ತನ್ನದಾಗಿಸಿಕೊಂಡಿದೆ. ನೋಂದಾಯಿಸಿಕೊಂಡಿದ್ದ 21,692 ವಿದ್ಯಾರ್ಥಿಗಳ ಪೈಕಿ 20,946 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನೂ ತೀರ್ಥಹಳ್ಳಿಯ ವಿದ್ಯಾರ್ಥಿನಿ ಸ್ಟೇಟ್ಗೆ ಸೆಕೆಂಡ್ ರ್ಯಾಂಕ್ ಬಂದಿದ್ದಾಳೆ .
ಎಸ್‌ಎಸ್‌ಎಲ್‌ಸಿ ಫಲಿತಾಂಶ : ವಾಗ್ದೇವಿ ಇಂಗ್ಲಿಷ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಧನೆ
ತೀರ್ಥಹಳ್ಳಿಯ ವಾಗ್ದೇವಿ ಇಂಗ್ಲಿಷ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಘ ಕೆ.ಎಸ್. 625 ಕ್ಕೆ 624 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಇವರು ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮೇಲಿನ ಕಡಗೋಡು ನಿವಾಸಿಗಳಾದ, ಶಿಕ್ಷಕ ಶಿವಕುಮಾರ್ ಮತ್ತು ಮಂಗಳಾ ದಂಪತಿಯ ಪುತ್ರಿ.
ದೈನಂದಿನ ಪಾಠಗಳನ್ನು ಅಂದೇ ಓದಿಕೊಳ್ಳುತ್ತಿದ್ದ ರೂಢಿ ಹಾಗೂ ಕಠಿಣವೆನಿಸುತ್ತಿದ್ದ ಗಣಿತ ವಿಷಯಕ್ಕೆ ನೀಡಿದ ಹೆಚ್ಚಿನ ಒತ್ತು ತಮಗೆ ಯಶಸ್ಸು ತಂದುಕೊಟ್ಟಿದೆ ಎಂದು ಅನಘ ತಿಳಿಸಿದ್ದಾರೆ.
ನನ್ನ ಕಲಿಕೆಗೆ ಶಾಲೆಯ ಶಿಕ್ಷಕರ ನಿರಂತರ ಪ್ರೋತ್ಸಾಹ ಮತ್ತು ಪೋಷಕರ ಬೆಂಬಲವಿತ್ತು. ಪಿಯುಸಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿರುವೆ
ಅನಘ , ಎರಡನೆ ರ್ಯಾಂಕ್ ಪಡೆದ ವಿದ್ಯಾರ್ಥಿನಿ
ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿರುವ ತಂದೆ ಶಿವಕುಮಾರ್, ಅಂದಿನ ಪಾಠವನ್ನು ಅಂದೇ ಓದುತ್ತಿದ್ದ ಅವಳ ಶಿಸ್ತುಬದ್ಧ ಅಧ್ಯಯನವೇ ಪರೀಕ್ಷೆಯ ಸಮಯದಲ್ಲಿ ಬಹಳ ಅನುಕೂಲವಾಯಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಧನೆ
ಜಿಲ್ಲೆಯ ತಾಲೂಕುವಾರು ಫಲಿತಾಂಶವನ್ನು ಗಮನಿಸಿದರೆ, ತೀರ್ಥಹಳ್ಳಿ ಶೇಕಡಾ 99.60 ರಷ್ಟು ಫಲಿತಾಂಶ ದಾಖಲಿಸಿ ಜಿಲ್ಲೆಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಸಾಗರ ಶೇಕಡಾ 99.01, ಹೊಸನಗರ ಶೇಕಡಾ 98.90, ಸೊರಬ ಶೇಕಡಾ 96.77, ಶಿವಮೊಗ್ಗ ಶೇಕಡಾ 96.55, ಶಿಕಾರಿಪುರ ಶೇಕಡಾ 94.79 ಹಾಗೂ ಭದ್ರಾವತಿ ತಾಲೂಕು ಶೇಕಡಾ 94 ರಷ್ಟು ತೇರ್ಗಡೆ ಪ್ರಮಾಣವನ್ನು ಹೊಂದಿವೆ.
- ಅನಘ ಅವರೊಂದಿಗೆ ಜಿಲ್ಲೆಯ ಇತರ ಹಲವು ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಗಳಿಸಿದ್ದಾರೆ. ಶಿವಮೊಗ್ಗದ ಪ್ರಿಯದರ್ಶಿನಿ ಪ್ರೌಢಶಾಲೆಯ ಕೃತಿ ಪಿ.ಎಸ್. 623 ಅಂಕಗಳನ್ನು ಪಡೆದುಕೊಂಡಿದ್ದಾರೆ.
- ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಅಕುಲ್ ವಿಷ್ಣು ಭಟ್ ಹಾಗೂ ಶಿಕಾರಿಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೇಶವ ಜಿ. ಅವರು ತಲಾ 622 ಅಂಕಗಳನ್ನು ಗಳಿಸಿದ್ದಾರೆ.
- ಶಿವಮೊಗ್ಗದ ವಿಕಾಸ ಪ್ರೌಢಶಾಲೆಯ ಚಿತ್ಸುಕಿ ಆರ್. ನಾಡಿಗ್ ಮತ್ತು ನವಜ್ಯೋತಿ ಇಂಗ್ಲಿಷ್ ಪ್ರೌಢಶಾಲೆಯ ದೇವಿ ಪ್ರಸಾದ್ ಹೆಚ್.ಯು. ತಲಾ 621 ಅಂಕ ಪಡೆದಿದ್ದಾರೆ.
- ಅದೇ ರೀತಿ, ಭದ್ರಾವತಿಯ ಸೇಂಟ್ ಮೇರಿಸ್ ಇಂಗ್ಲಿಷ್ ಪ್ರೌಢಶಾಲೆಯ ಚಾರ್ವಿ ಎಂ., ಸಾಗರದ ಕ್ರಿಯೇಟಿವಿಟಿ ಇಂಟರ್ ನ್ಯಾಷನಲ್ ಇಂಗ್ಲಿಷ್ ಪ್ರೌಢಶಾಲೆಯ ಪೂರ್ವ ವಿಬಪಟೇಲ್ ಹಾಗೂ ಶಿವಮೊಗ್ಗದ ಡಿವಿಎಸ್ ಪ್ರೌಢಶಾಲೆಯ ಶಾಂಭವಿ ಕೆ.ಪಿ. ಅವರು ತಲಾ 620 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಮುಖ ವಿದ್ಯಾರ್ಥಿಗಳಾಗಿದ್ದಾರೆ.
SSLC ಪರೀಕ್ಷೆ 2 ರ ಬಗ್ಗೆ ಮಾಹಿತಿ
ಪರೀಕ್ಷೆ-2 ಹಾಗೂ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಮಂಜುನಾಥ್ ಮಾಹಿತಿ ನೀಡಿದ್ದಾರೆ.
2025-26ರ ಸಾಲಿನಲ್ಲಿ ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗಿ, ಕೇವಲ ತೃತೀಯ ಭಾಷಾ ವಿಷಯದಲ್ಲಿ ಮಾತ್ರ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಕ್ಕೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆದರೆ, ಉಳಿದ ವಿಷಯಗಳಲ್ಲಿ ಫಲಿತಾಂಶ ಸುಧಾರಣೆ ಬಯಸುವ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಿದೆ.
ಇದರ ಜೊತೆಗೆ, ದೀರ್ಘಕಾಲದ ಗೈರುಹಾಜರಿಯ ಕಾರಣದಿಂದಾಗಿ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಹೊಸ ಖಾಸಗಿ ವಿದ್ಯಾರ್ಥಿಗಳಾಗಿ ತಾವು ಓದಿದ ಶಾಲೆಯ ಮುಖಾಂತರವೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಇವರು ನೋಂದಣಿ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw