ಶಿವಮೊಗ್ಗ: ರೈಲು ಪ್ರಯಾಣ ದರವನ್ನು ಕೇಂದ್ರ ಸರ್ಕಾರ ಪದೇ ಪದೇ ಹೆಚ್ಚಿಸುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಡವರ ಜೇಬಿಗೆ ಕತ್ತರಿ ಹಾಕುತ್ತಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ರೈಲು ತಡೆದು ಪ್ರತಿಭಟನೆ ಮಾಡುವ ಪ್ರಯತ್ನವೂ ನಡೆಯಿತು, ಆದರೆ ಪೊಲೀಸರು ಕಾರ್ಯಕರ್ತರನ್ನು ವಶಪಡಿಸಿಕೊಂಡರು. ನಂತರ ಸ್ಟೇಷನ್ ಮಾಸ್ಟರ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶಿವಮೊಗ್ಗದ ನಿರಂಜನಿ ರವೀಂದ್ರ ಅವರಿಗೆ ಸೌತ್ ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್
Shivamogga Youth Congress ಮನವಿ ಪತ್ರದಲ್ಲಿ ಏನಿದೆ?
ಅಚ್ಚೇ ದಿನ್ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಜನಸಾಮಾನ್ಯರಿಗೆ ನೆರವಾಗುವ ಬದಲು ನಿರಂತರವಾಗಿ ಬೆಲೆ ಏರಿಕೆಯ ಗದಾಪ್ರಹಾರ ಮಾಡುತ್ತಿದೆ. ಸಾರಿಗೆ ವ್ಯವಸ್ಥೆಯಲ್ಲಿ ಬಡವರ ನೆಚ್ಚಿನ ರೈಲು ಪ್ರಯಾಣದ ದರವನ್ನು ಕಳೆದ ಒಂದು ವರ್ಷದಲ್ಲಿ ಎರಡನೇ ಬಾರಿಗೆ ಏರಿಕೆ ಮಾಡಿರುವುದು ತೀವ್ರ ಖಂಡನೀಯವಾಗಿದ್ದು, ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತದ ಅತಿದೊಡ್ಡ ರೈಲ್ವೆ ವ್ಯವಸ್ಥೆಯು ಲಾಭದಲ್ಲಿದ್ದರೂ ಸಹ ಸರ್ಕಾರ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.
ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಹಾಗೂ ದಿನಬಳಕೆಯ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಿಂದ ಜನರು ಈಗಾಗಲೇ ತತ್ತರಿಸಿದ್ದಾರೆ. ಇದರ ಜೊತೆಗೆ ರಸಗೊಬ್ಬರ ಮತ್ತು ಔಷಧಿಗಳ ಬೆಲೆ ಹೆಚ್ಚಳ ಮಾಡುವ ಮೂಲಕ ರೈತರು ಹಾಗೂ ಜನಸಾಮಾನ್ಯರ ಆರೋಗ್ಯದ ವಿಷಯದಲ್ಲೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಹೆಚ್ಚಿಸಿರುವ ರೈಲು ಪ್ರಯಾಣ ದರವನ್ನು ಹಿಂಪಡೆಯಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಟ್ಟುನಿಟ್ಟಿನ ಲಗಾಮು ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೇಶವ್ಯಾಪಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಯುವ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಹರ್ಷಿತ್ ಗೌಡ, ಹೆಚ್ ಸಿ.ಯೋಗೀಶ್, ರಮೇಶ್ ಹೆಗ್ಡೆ, ವಿಜಯ ಕುಮಾರ್, ಧೀರ್ ರಾಜ್ ಹೊನ್ನವಿಲೆ, ನಗರ ಅಧ್ಯಕ್ಷರ ಶೆಟ್ಟಿ ಗ್ರಾಮಾಂತರ ಅಧ್ಯಕ್ಷರಾದ ಪ್ರವೀಣ್ ಬ್ಲಾಕ್ ಅಧ್ಯಕ್ಷರ ಗಿರೀಶ್ ಮೊಹಮ್ಮದ್ ಗೌಸ್ ಪ್ರವೀಣ್ ಕುಮಾರ್ ಶಶಿಕುಮಾರ್ ಮೊದಲಾದವರು ಭಾಗಿಯಾಗಿದ್ದರು.
Shivamogga Youth Congress Protest
