ಮೇ 9 ಹಾಗೂ 10ರಂದು ನಗರದಲ್ಲಿ ಶಿವಮೊಗ್ಗ ಸಾಹಿತ್ಯ ಹಬ್ಬ, ಏನೆಲ್ಲಾ ಕಾರ್ಯಕ್ರಮ ಇರಲಿದೆ

Shivamogga Sahitya Habba ಶಿವಮೊಗ್ಗ : ನಗರದ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಮೇ 9 ಮತ್ತು 10ರಂದು ಎರಡು ದಿನಗಳ ಕಾಲ ಕರ್ನಾಟಕ ಸಂಘದ ಆವರಣದಲ್ಲಿ ಅಕ್ಷರಗಳ ಸಂಭ್ರಮ- ಶಿವಮೊಗ್ಗ ಸಾಹಿತ್ಯ ಹಬ್ಬ ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅಭಿವ್ಯಕ್ತಿ ಟ್ರಸ್ಟ್‌ನ ಮುಖ್ಯಸ್ಥರಾದ ಡಾ. ಪಿ.ಆರ್. ಸುಧೀಂದ್ರ  ಹೇಳಿದರು.

ಶಿವಮೊಗ್ಗ:  ಎರಡು ದಿನ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಕರೆಂಟ್​​ ಇರಲ್ಲ. ಎಲ್ಲಿ, ಯಾವಾಗ

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು

ಇದೊಂದು ವಿಶಿಷ್ಟ ರೀತಿಯ ಸಾಹಿತ್ಯ ಕಾರ್ಯಕ್ರಮವಾಗಿದ್ದು, ಈ ಸಾಹಿತ್ಯ ಹಬ್ಬದಲ್ಲಿ ಚರ್ಚಾಗೋಷ್ಠಿಗಳು, ಸಾಹಿತ್ಯ ಸಂವಾದ, ಕವಿಗೋಷ್ಠಿ, ಲೇಖಕರೊಂದಿಗೆ ನೇರ ಸಂವಾದ, ಪುಸ್ತಕ ಮಾರಾಟ ಮಳಿಗೆಗಳು ಹಾಗೂ ಕೇಳುಗರೊಂದಿಗೆ ಮಾತುಕತೆ ಸೇರಿದಂತೆ ಹತ್ತು-ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಮೇ 9ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮೊದಲ ಗೋಷ್ಠಿಯಲ್ಲಿ ಭಾರತೀಯ ಸಾಹಿತ್ಯದಲ್ಲಿ ರಸಧ್ವನಿ ಎಂಬ ವಿಷಯದ ಕುರಿತು ವಿಶೇಷ ಚಿಂತನೆ ನಡೆಯಲಿದೆ. ಈ ಗೋಷ್ಠಿಯಲ್ಲಿ ಸಂವಾದಕಾರರಾಗಿ ಡಾ. ಎಸ್.ಆರ್. ಲೀಲಾ ಹಾಗೂ ಸೂರ್ಯಪ್ರಕಾಶ್ ಪಂಡಿತ್ ಅವರು ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಅಂದು ಸಂಜೆ 7 ಗಂಟೆಗೆ ನಾದೋಲ್ಲಾಸ’ ಎಂಬ ವಿಶೇಷ ವಯಲಿನ್ ವಾದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎರಡನೇ ದಿನವಾದ ಮೇ 10ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಎರಡನೇ ಗೋಷ್ಠಿ ಆರಂಭವಾಗಲಿದ್ದು, ‘ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಸಮನ್ವಯತೆ’ ಎಂಬ ವಿಷಯದ ಕುರಿತು ಮಹತ್ವದ ಸಂವಾದ ನಡೆಯಲಿದೆ. ಈ ಗೋಷ್ಠಿಯಲ್ಲಿ ಬಿ.ಎಲ್. ಪ್ರವೀಣ್, ಅಶ್ವಿನಿ ದೇಸಾಯಿ ಹಾಗೂ ರೋಹಿತ್ ಚಕ್ರತೀರ್ಥ ಅವರು ಭಾಗವಹಿಸಿ ಕುವೆಂಪು ಸಾಹಿತ್ಯದ ವಿವಿಧ ಆಯಾಮಗಳನ್ನು ತೆರೆದಿಡಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಮೂರನೇ ಗೋಷ್ಠಿ ನಡೆಯಲಿದ್ದು, ಭೈರಪ್ಪನವರ ಸಾಹಿತ್ಯ ಕನ್ನಡ ಓದುಗ ವಲಯವನ್ನು ಉಳಿಸಿ-ಬೆಳೆಸಿದ ಪರಿ’ಎಂಬ ವಿಷಯದ ಮೇಲೆ ಚರ್ಚೆ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ಅಕ್ಕ ಅಲ್ಲಮ ಅರಿವಿನ ಆಯಾಮಗಳು ಎಂಬ ಗೋಷ್ಠಿ ಹಾಗೂ ಮಧ್ಯಾಹ್ನ 2 ಗಂಟೆಗೆ ‘ಪರಿಸರ ಅವಶ್ಯಕತೆಗಳು: ವಿಸ್ಮಯಗಳ ಆಗರ’ ಎಂಬ ವಿಷಯದ ಕುರಿತು ಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 3.30ಕ್ಕೆ ಸಾಮಗಾನ ಜಿ.ಎಸ್. ಕಾವ್ಯ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 7 ಗಂಟೆಗೆ ಸಾಹಿತ್ಯದಿಂದ ಸಾಮಾಜಿಕ ಸ್ವಾಸ್ಥ್ಯ ಎಂಬ ವಿಷಯದ ಕುರಿತು ಅಂತಿಮ ಗೋಷ್ಠಿ ಜರುಗಲಿದೆ. ಈ ಸಂವಾದದಲ್ಲಿ ರೋಹಿತ್ ಚಕ್ರವರ್ತಿ, ಸಹನಾ ವಿಜಯ್ ಕುಮಾರ್, ಎಂ.ಆರ್. ದತ್ತಾತ್ರಿ ಅವರು ಪಾಲ್ಗೊಳ್ಳಲಿದ್ದು, ಡಾ. ಅಜಕ್ಕಳ ಗಿರೀಶ್ ಭಟ್ ಅವರು ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶಿವಮೊಗ್ಗ ಲಿಟ್ ಫೆಸ್ಟ್ ಎಂಬ ಪರಿಕಲ್ಪನೆಯನ್ನು ಮಲೆನಾಡಿನ ಈ ನೆಲದಲ್ಲಿ ಹುಟ್ಟುಹಾಕಿ, ಭಾರತೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಭಾರತೀಯ ಕಲ್ಪನೆಗಳನ್ನು ಪ್ರತಿಪಾದಿಸುವ ಸಾಹಿತ್ಯದ ಹಬ್ಬವಾಗಿ ಇದನ್ನು ಆಯೋಜಿಸಲಾಗುತ್ತಿದೆ ಎಂದು ಸುಧೀಂದ್ರ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿನಯ್ ಶಿವಮೊಗ್ಗ, ದುರ್ಗಾಪ್ರಸಾದ್, ಡಾ. ರಂಜಿನಿ ಬಿದರಳ್ಳಿ ಹಾಗೂ ನವೀನ್ ಉಪಸ್ಥಿತರಿದ್ದರು.

Shivamogga Sahitya Habba on May 9 and 10

Shivamogga Sahitya Habba on May 9 and 10
Shivamogga Sahitya Habba on May 9 and 10