ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ

prathapa thirthahalli
Prathapa thirthahalli - content producer

ಶಿವಮೊಗ್ಗ :  ಮದುವೆ ಎಂಬ ಬಂಧವೇ ಹಾಗೆ, ಹಿರಿಯರ ನಂಬಿಕೆಯಂತೆ ಯಾರ್ಯಾರ ಹಣೆಯಲ್ಲಿ ಯಾರ ಹೆಸರು ಬರೆದಿರುತ್ತದೆಯೋ ಅವರನ್ನೇ ಮದುವೆಯಾಗುತ್ತಾರೆ. ಅದನ್ನು ಆ ಬ್ರಹ್ಮನಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಅದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗದ ಊರುಗಡೂರಿನಲ್ಲಿ ನೆಲೆಸಿರುವ ಪುರೋಹಿತರಾದ ಶ್ರೀನಿವಾಸ್ ಅವರು ದೂರದ ಅಹಮದಾಬಾದ್‌ನಲ್ಲಿರುವ ಯುವತಿಯೊಬ್ಬಳನ್ನು ವಿವಾಹವಾಗಿದ್ದಾರೆ.

ಇಂಡಿಗೋ ವಿಮಾನ ರದ್ದು : ಶಿವಮೊಗ್ಗ ಪ್ರಯಾಣಿಕರ ಪರದಾಟ 

Shivamogga Priest Marries Ahmedabad Girl
Shivamogga Priest Marries Ahmedabad Girl

ಇತ್ತೀಚಿನ ದಿನಗಳಲ್ಲಿ ವರನಿಗೆ ವಧು ಹುಡುಕುವ ಕೆಲಸ ಒಂಥರಾ ಕಬ್ಬಿಣದ ಕಡಲೆಯಂತಾಗಿದೆ. ಎಲ್ಲಿ ಹುಡುಕಿದರೂ ಹುಡುಗಿ ಸಿಗುವುದೇ ಇಲ್ಲ. ಅದರಲ್ಲೂ ಬ್ರಾಹ್ಮಣ ಸಮುದಾಯದ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ. ಹಲವಾರು ವರ್ಷಗಳಿಂದ ಹುಡುಕಿದರೂ ಗಂಡು ಒಪ್ಪಿದರೆ, ಹೆಣ್ಣು ಒಪ್ಪುವುದಿಲ್ಲ. ಒಂದು ವೇಳೆ ಹೆಣ್ಣು ಒಪ್ಪಿದರೆ ಗಂಡಿನ ಕುಟುಂಬ ಸದಸ್ಯರು ಒಪ್ಪುವುದಿಲ್ಲ. ಇಂತಹ ಸಂದರ್ಭದಲ್ಲಿ ಅಪರೂಪದ ಕಲ್ಯಾಣವು ದೂರದ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. ಈ ಮೂಲಕ ಉತ್ತರ ಭಾರತಕ್ಕೂ ದಕ್ಷಿಣ ಭಾರತಕ್ಕೂ ವಿವಾಹದ ಮೂಲಕ ಹೊಸ ನಂಟು ಬೆಸೆದಿದೆ.

ಶಿವಮೊಗ್ಗದ ಊರುಗಡೂರಿನಲ್ಲಿ ನೆಲೆಸಿರುವ ಪುರೋಹಿತರಾದ ಶ್ರೀನಿವಾಸ್ ಮತ್ತು ಅಹಮದಾಬಾದ್‌ನಲ್ಲಿ ವಾಸವಿರುವ ಪೂಜಾ ತಿವಾರಿಯವರ ವಿವಾಹವು ನವೆಂಬರ್ 30 ರಂದು ಬ್ರಾಹ್ಮಣರ ಸಂಪ್ರದಾಯದಂತೆ ಅಹಮದಾಬಾದ್‌ನಲ್ಲಿ ನೆರವೇರಿತು. ಈ ದಂಪತಿಗಳು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು, ಹಿರಿಯರು, ಕುಟುಂಬ ಸದಸ್ಯರು ಈ ನವ ಜೋಡಿಗೆ ಆಶೀರ್ವದಿಸಿದ್ದಾರೆ.

Shivamogga ನೆಂಟಸ್ತನ ಬೆಳೆದಿದ್ದು ಹೇಗೆ?

ಪುರೋಹಿತ ವೃತ್ತಿ ಮಾಡುತ್ತಾ ಹಲವಾರು ಜೋಡಿಗಳಿಗೆ ಆಶೀರ್ವದಿಸಿದ್ದ ಶ್ರೀನಿವಾಸ್ ಅವರು ಸ್ವತಃ ಹಲವಾರು ವರ್ಷಗಳಿಂದ ತಮಗೆ ಸೂಕ್ತವಾದ ಹೆಣ್ಣು ಹುಡುಕುತ್ತಿದ್ದರು. ಆದರೂ ತಮ್ಮ ಕಲ್ಯಾಣದ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿರಲಿಲ್ಲ. ಆಗ ಅಯೋಧ್ಯೆಯಲ್ಲಿ ನೆಲೆಸಿರುವ ಸಂಬಂಧಿಕರ ಸಹಾಯದಿಂದ ಅಹಮದಾಬಾದ್‌ನಲ್ಲಿರುವ ಕುಟುಂಬವೊಂದರಲ್ಲಿ ಹುಡುಗಿಯನ್ನು ಹುಡುಕುತ್ತಿರುವ ಮಾಹಿತಿ ಅವರಿಗೆ ಲಭಿಸಿತು.ಆದರೆ, ಉತ್ತರ ಭಾರತದ ಹುಡುಗಿ ಎಂದ ಮೇಲೆ ಭಾಷೆ, ಸಂಪ್ರದಾಯಗಳು ಭಿನ್ನವಾಗಿರುತ್ತವೆ; ಅವರು ನಮ್ಮ ಕಡೆ ಹೊಂದಿಕೊಳ್ಳುತ್ತಾರೋ ಇಲ್ಲವೋ, ಕುಟುಂಬ ಸದಸ್ಯರೊಂದಿಗೆ ಬೆರೆಯುತ್ತಾರೋ ಏನೋ ಎಂಬ ಅನುಮಾನಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಹಾಗಾಗಿ ಸ್ವಲ್ಪ ಯೋಚನೆ ಮಾಡಿದ ಬಳಿಕ ಶ್ರೀನಿವಾಸ್ ಅವರು ಒಂದು ಬಾರಿ ಅಹಮದಾಬಾದ್‌ಗೆ ಪ್ರಯಾಣಿಸಿ ಹೆಣ್ಣು ನೋಡಿಕೊಂಡು ಬಂದರು. ಹುಡುಗಿಯ ಮನೆಯಲ್ಲಿ ತಂದೆ ರಾಜೇಶ್ ತಿವಾರಿ ಅವರು ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ. ತಾಯಿ ರೂಪಾ ತಿವಾರಿ ಅವರು ಗೃಹಿಣಿಯಾಗಿದ್ದಾರೆ. ಮಗಳು ಪೂಜಾ ತಿವಾರಿ ಪಿಯುಸಿವರೆಗೆ ಓದಿದ್ದು, ಅವರ ಸಹೋದರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹೆಣ್ಣು ನೋಡಿಕೊಂಡು ಬಂದರೂ ಎರಡು ಕುಟುಂಬದವರು ವಿವಾಹಕ್ಕೆ ಒಪ್ಪಿಗೆ ಸೂಚಿಸುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡರು. ಹೆಣ್ಣಿನ ಮನೆಯವರು ಒಪ್ಪಿದರೂ, ಶ್ರೀನಿವಾಸ್ ಅವರು ಮುಂದೇನು ಮಾಡಬೇಕೆಂದು ತೋಚದೆ ಕಾಲ ದೂಡಿದರು. ಭಾಷೆ ಬೇರೆ, ರಾಜ್ಯ ಬೇರೆ, ಹೇಗೆ ಹೊಂದಿಕೊಳ್ಳುವುದು ಎಂಬ ಚಿಂತೆ ಅವರ ಮನಸ್ಸಿನಲ್ಲಿತ್ತು. ಅದಾಗಲೇ ಅವರು ಅಲ್ಪ ಸ್ವಲ್ಪ ಹಿಂದಿ ಭಾಷೆಯನ್ನು ಮಾತನಾಡಲು ಕಲಿತುಕೊಂಡಿದ್ದರು. ಹಾಗಾಗಿ ಕೊನೆಗೆ ಅವರು ವಿವಾಹಕ್ಕೆ ಒಪ್ಪಿಗೆ ಸೂಚಿಸಿ, ಇದೀಗ ಬ್ರಾಹ್ಮಣ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Shivamogga Priest Marries Ahmedabad Girl

Shivamogga Priest Marries Ahmedabad Girl
Shivamogga Priest Marries Ahmedabad Girl
Share This Article