ಶಿವಮೊಗ್ಗ ಜಿಲ್ಲಾ ವರದಿ: ಪಶು ವೈದ್ಯ ಸಾವು! ಬಾರಲ್ಲಿ ಹಲ್ಲೆ! ಅಣ್ಣ, ಅತ್ತಿಗೆಗೆ ಏಟು, ಕಾರು ಅಪಘಾತ, ಚಿರತೆಯ ನಿಗೂಢ & 112 ರಕ್ಷಣೆಯ ಸುದ್ದಿ

ಶಿವಮೊಗ್ಗ  | ಜಿಲ್ಲೆಯಾದ್ಯಂತ ನಡೆದ ಘಟನೆಗಳ ಇವತ್ತಿನ ಸಂಕ್ಷಿಪ್ತ ಸುದ್ದಿಯಲ್ಲಿ ನಾಲ್ಕು ಪ್ರತ್ಯೇಕ ಘಟನೆಗಳನ್ನು ವಿವರಿಸಲಾಗಿದೆ. 

Shivamogga News Roundup
Shivamogga News Roundup

ಲೈಟ್ ಹಾಕಿದ ಕಾರಣಕ್ಕೆ ಅಣ್ಣ ಅತ್ತಿಗೆ ಮೇಲೆ ಹಲ್ಲೆ 

ಶಿವಮೊಗ್ಗ ತಾಲ್ಲೂಕಿನ ಗ್ರಾಮವೊಂದರಲ್ಲಿ ಹಗಲು ಹೊತ್ತಿನಲ್ಲಿ ಲೈಟ್ ಹಾಕಿದ ಕ್ಷುಲ್ಲಕ ಕಾರಣಕ್ಕಾಗಿ ಮೈದುನನೊಬ್ಬ ಅಣ್ಣ ಮತ್ತು ಅತ್ತಿಗೆಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಅತ್ತಿಗೆಗೆ ಬೈಯುತ್ತಿದ್ದಾಗ ಜಗಳ ಬಿಡಿಸಲು ಬಂದ ಅಣ್ಣನ ಮೇಲೂ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ದಂಪತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕುಡಿಯಲು ಹಣ ಕೊಡದಿದ್ದಕ್ಕೆ ಹಲ್ಲೆ 

ಇತ್ತ ಶಿವಮೊಗ್ಗ ನಗರದ ಎಪಿಎಂಸಿ ಸಮೀಪದ ವೈನ್ ಶಾಪ್ ಬಳಿ ಕುಡಿಯಲು ಹಣ ನೀಡದಿದ್ದಕ್ಕೆ ಕಿರಣ್ ಎಂಬುವವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಜೀವ ಬೆದರಿಕೆ ಹಾಕಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೋಪಾಳ ನಿವಾಸಿ ಕಿರಣ್ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.

Shivamogga News Roundup
Shivamogga News Roundup

ಯಡೂರುನಲ್ಲಿ ಚಿರತೆ ಸಾವು

ಆಚಿಗೆ ಹೊಸನಗರ ತಾಲ್ಲೂಕಿನ ಯಡೂರು ನಲ್ಲಿ ಶನಿವಾರ ಅಂದಾಜು 5 ವರ್ಷ ಪ್ರಾಯದ ಚಿರತೆಯೊಂದರ ಮೃತದೇಹ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಈ ವಿಷಯ ಬೆಳಕಿಗೆ ಬಂದಿದ್ದು, ಮೇಲ್ನೋಟಕ್ಕೆ ಇದು ಸ್ವಾಭಾವಿಕ ಸಾವು ಎಂದು ತಿಳಿದುಬಂದಿದೆ. ಆರ್‌ಎಫ್‌ಒ ಸಂತೋಷ ಮಲ್ಲನಗೌಡ್ರ ಪ್ರಕರಣ ದಾಖಲಿಸಿಕೊಂಡಿದ್ದು, ತಹಸೀಲ್ದಾರ್ ಭರತ್ ರಾಜ್ ಹಾಗೂ ಎಸಿಎಫ್ ಮೋಹನ್ ಕುಮಾರ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಪಶು ವೈದ್ಯಾಧಿಕಾರಿ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಾಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶು ವೈದ್ಯಾಧಿಕಾರಿಯೊಬ್ಬರು ಶರಾವತಿ ಹಿನ್ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು 38 ವರ್ಷದ ಸುನೀಲ್ ಎಂದು ಗುರುತಿಸಲಾಗಿದ್ದು, ಇವರು ಭಾನುವಾರದ ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಹಕ್ರೆ ಸಮೀಪದ ಶರಾವತಿ ಬ್ಯಾಕ್ ವಾಟರ್‌ಗೆ ಪ್ರವಾಸಕ್ಕೆ ತೆರಳಿದ್ದರು. ಈಜು ಬರುತ್ತಿದ್ದ ಕಾರಣ ಅವರು ನೀರಿನಲ್ಲಿ ಈಜಲು ಇಳಿದಿದ್ದಾಗ ಅನಿರೀಕ್ಷಿತವಾಗಿ ಮುಳುಗಿ ನಾಪತ್ತೆಯಾಗಿದ್ದರು. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆನಂದಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತ

ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಮತ್ತು ಅಶೋಕ್ ಲೇಲ್ಯಾಂಡ್ ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಇಆರ್‌ವಿ (ERV) ಸಿಬ್ಬಂದಿಗಳು ಪರಿಶೀಲನೆ ನಡೆಸಿದರು, ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ,ಅಪಘಾತದ ರಭಸಕ್ಕೆ ಕಾರಿನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ.ಈ ಸಂಬಂಧ ಪ್ರಕರಣ ದಾಖಲಾಗಿದೆ. 

Shivamogga News Roundup
Shivamogga News Roundup

ಆತ್ಮಹತ್ಯೆ ಮಾಡಿಕೊಳ್ತಿದ್ದ ವ್ಯಕ್ತಿ 112 ಗೆ ಬಂತು ಕರೆ

ದಿನಾಂಕ 11-01-2026 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ಸಂಬಂಧ  ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಇಆರ್‌ವಿ ಸಿಬ್ಬಂದಿಗಳು, ಅವರ ಕುಟುಂಬದವರು ಮತ್ತು ಅಕ್ಕಪಕ್ಕದ ಮನೆಯವರು ವ್ಯಕ್ತಿಯನ್ನು ತಡೆದು ಆಸ್ಪತ್ರೆಗೆ ದಾಖಲಿಸಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಕುಟುಂಬದವರಿಂದ ಹೆಚ್ಚಿನ ಮಾಹಿತಿ ಪಡೆದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರದಿ ನೀಡಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ ಜಿಲ್ಲಾ ಸುದ್ದಿ ಸಾರಾಂಶ: ಅಪಘಾತಗಳು, ಹಲ್ಲೆ ಪ್ರಕರಣಗಳು  Shivamogga News Roundup: Accidents, Crime Updates,