ಶಿವಮೊಗ್ಗ ಐಸಿಸ್ ಮಾಡ್ಯುಲ್ ನ ಆರೋಪಿಗಳ ಪೈಕಿ ಓರ್ವನಿಗೆ ಎನ್ಇಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನವನಾದ ಅರಾಫತ್ ಅಲಿ ಶಿಕ್ಷೆಗೆ ಗುರಿಯಾದಾತ. 2020 ರಿಂದ ದೇಶಬಿಟ್ಟು ತಲೆಮರೆಸಿಕೊಂಡಿದ್ದ ಈತನನ್ನು 14 Sep 2023 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ NIA ಪೊಲೀಸರು ಬಂಧಿಸಿದ್ದರು.
ಅರಾಫತ್ ಅಲಿಗೆ ಎನ್ಐಎ ಕೋರ್ಟ್ ಐಪಿಸಿ ಸೆಕ್ಷನ್ 120B ಅಡಿಯಲ್ಲಿ 6 ವರ್ಷ, ಐಪಿಸಿ 121A ಅಡಿಯಲ್ಲಿ 6 ವರ್ಷ, ಐಪಿಸಿ 153A ಅಡಿಯಲ್ಲಿ 2 ವರ್ಷ, ಐಪಿಸಿ 204 ರ ಅಡಿಯಲ್ಲಿ 2 ವರ್ಷ ಹಾಗೂ ಯುಎಪಿಎ ಸೆಕ್ಷನ್ 13, 17, 18, 18B, 20, 38, 39 ಮತ್ತು 40 ರ ಅಡಿಯಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಶಿವಮೊಗ್ಗ ಐಸಿಸ್ ಮಾಡ್ಯುಲ್ ಸ್ಕೆಚ್
ಶಿವಮೊಗ್ಗ ತುಂಗಾ ತೀರದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್, ಶಿವಮೊಗ್ಗದಲ್ಲಿ ಭಯೋತ್ಪಾದನಾ ಸಂಚು ರೂಪಿಸಿದ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅರಾಫತ್ ಉಳಿದ ಆರೋಪಿಗಳಿಗೆ ಮಾಸ್ಟರ್ ಮೈಂಡ್ ಆಗಿದ್ದನಷ್ಟೆ ಅಲ್ಲದೆ, ಉಗ್ರ ಕೃತ್ಯಗಳಿಗೆ ಹವಾಲಾ ಮೂಲಕ ಹಣ ನೀಡುವುದಷ್ಟೆ ಅಲ್ಲದೆ ನೇಮಕಾತಿಯನ್ನು ಸಹ ಮಾಡಿಕೊಳ್ಳುತ್ತಿದ್ದ ಎಂಬುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಸದ್ಯ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ಗೆ ಸಂಬಂಧಿಸಿದಂತೆ ಎನ್ಐಎ ದಾಖಲಿಸಿರುವ ವಿಶೇಷ ಪ್ರಕರಣ ಸಂಖ್ಯೆ 706/2023 ರಲ್ಲಿ ಅರಾಫತ್ ಅಲಿಗೆ ಶಿಕ್ಷೆಯಾಗಿದೆ.
ಪ್ರಕರಣದಲ್ಲಿ ಹತ್ತನೇ ಆರೋಪಿ ಆಗಿರುವ ಅರಾಫತ್ ಅಲಿಯು, ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಹನ್ನೊಂದನೇ ಆರೋಪಿ ಮುಸಾವಿರ್ ಹುಸೇನ್ ಶಾಜಿಬ್ ಹಾಗೂ ಹನ್ನೆರಡನೇ ಆರೋಪಿ ಅಬ್ದುಲ್ ಮತೀನ್ ತಾಹಾನಿಂದ ಐಸಿಸ್ ಸಂಘಟನೆಗೆ ಸೇರ್ಪಡೆಗೊಂಡಿದ್ದ.
ತದನಂತರ ಇವರ ನಿರ್ದೇಶನದ ಮೇರೆಗೆ ಮೊದಲನೇ ಆರೋಪಿ ಮೊಹಮ್ಮದ್ ಶಾರಿಕ್ , ಎರಡನೇ ಆರೋಪಿ ಮಾಜ್ ಮುನೀರ್ ಅಹ್ಮದ್ ಹಾಗೂ ಇತರರನ್ನು ಉಗ್ರಗಾಮಿ ಚಟುವಟಿಕೆಗಳಿಗಾಗಿ ನೇಮಕಾತಿ ಮಾಡಿಕೊಂಡಿದ್ದ.
8 ಮತ್ತು 9 ನೇ ಆರೋಪಿಗೆ ಶಿಕ್ಷೆ
2019 ರಲ್ಲಿ ಬೆಂಗಳೂರಿನಲ್ಲಿದ್ದಾಗ ಅಬ್ದುಲ್ ಮತೀನ್ ತಾಹಾ ಮೂಲಕ ಆನ್‌ಲೈನ್ ಹ್ಯಾಂಡ್ಲರ್ ಕರ್ನಲ್ ಎಂಬಾತನ ಪರಿಚಯವೂ ಈತನಿಗೆ ಆಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ 8 ಮತ್ತು 9 ನೇ ಆರೋಪಿಗೆ ಶಿಕ್ಷೆಯಾಗಿದೆ. ಇನ್ನೂ ಪ್ರಕರಣದಲ್ಲಿ ಎನ್ಐಎ ಪರವಾಗಿ ಸರ್ಕಾರಿ ಹಿರಿಯ ಅಭಿಯೋಜಕರಾದ ಪಿ.ಪ್ರಸನ್ನ ಕುಮಾರ್ ಮತ್ತು ಸಿ. ಸಚಿನ್ ವಾದ ಮಂಡಿಸಿದ್ದರು
ಅರಾಫತ್ ಅಲಿ ಮೇಲಿದ್ದ ಆರೋಪಗಳು
- ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಆರೋಪಿಸಿದಂತೆ ಆನ್‌ಲೈನ್ ಹ್ಯಾಂಡ್ಲರ್ ‘ಕರ್ನಲ್’ ಮತ್ತು ಇತರರೊಂದಿಗೆ ಸೇರಿ ಅರಾಫತ್ ಅಲಿ, ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸುವ ಸಂಚು ರೂಪಿಸಿದ್ದರು .
- ಸಿಎಎ ಮತ್ತು ಎನ್‌ಆರ್‌ಸಿ ಪ್ರತಿಭಟನೆಗಳು ನಡೆಯುತ್ತಿದ್ದ 2019 ಸಾಲಿನ ಡಿಸೆಂಬರ್ನಲ್ಲಿ ಅರಾಫತ್ ಅಲಿ ಮತ್ತು ಮೊಹಮ್ಮದ್ ಶಾರಿಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಪ್ರಚೋದನಕಾರಿ ಗೋಡೆಬರಹಗಳನ್ನು ಬರೆದಿದ್ದರು
- ಅಲ್-ಹಿಂದ್ ಮಾಡ್ಯೂಲ್ ಉಗ್ರ ಸಂಘಟನೆಯ ವಿಚಾರ ಬಯಲಿಗೆ ಬಂದ ಬಳಿಕ ಮುಸಾವಿರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹಾ ತಲೆಮರೆಸಿಕೊಂಡಿದ್ದರು. ಇವರೊಂದಿಗಿನ ನಂಟಿನ ಕಾರಣಕ್ಕೆ ತನ್ನ ಬಂಧನವಾಗಬಹುದು ಎಂದು ಅರಿತ ಅರಾಫತ್ ಅಲಿ, ಆನ್‌ಲೈನ್ ಹ್ಯಾಂಡ್ಲರ್ ಸೂಚನೆಯಂತೆ 2020 ರ ಜನವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಪರಾರಿಯಾಗಿದ್ದ.
- ವಿದೇಶದಲ್ಲಿದ್ದಾಗಲೂ ಆನ್‌ಲೈನ್ ಹ್ಯಾಂಡ್ಲರ್‌ನಿಂದ ಹಣವನ್ನು ಸ್ವೀಕರಿಸುತ್ತಿದ್ದ ಅರಾಫತ್, ಐಸಿಸ್ ನ ಶಂಕಿತ ಚಟುವಟಿಕೆಗಳನ್ನು ಮುಂದುವರಿಸಲು ಮೊಹಮ್ಮದ್ ಶಾರಿಕ್‌ಗೆ ಆ ಹಣ ಪೂರೈಸುತ್ತಿದ್ದ.
- ಅರಾಫತ್ ಅಲಿಯ ನಿರ್ದೇಶನದಂತೆ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಮಂಗಳೂರಲ್ಲಿ ಎರಡು ಕಡೆಗಳಲ್ಲಿ ಐಎಸ್, ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಹಾಗೂ ತಾಲಿಬಾನ್ ಸಂಘಟನೆಗಳನ್ನು ಬೆಂಬಲಿಸುವ ಗೋಡೆಬರಹಗಳನ್ನು ಬರೆದಿದ್ದರು.
- ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಸಂವಹನ ಮೂಲಕ ಅರಾಫತ್ ಇತರೆ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. 19.11.2022 ರಂದು ಮಂಗಳೂರರಲ್ಲಿ ಮೊಹಮ್ಮದ್ ಶಾರಿಕ್ ಪ್ರೆಶರ್ ಕುಕ್ಕರ್ ಸ್ಫೋಟಿಸುವವರೆಗೂ ಆತನೊಂದಿಗೆ ಅರಾಫತ್ ಅಲಿ ಸಂಪರ್ಕದಲ್ಲಿದ್ದ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
