ಶಿವಮೊಗ್ಗ, ಮಲೆನಾಡು ಟುಡೆ ನ್ಯೂಸ್ : ಬಾರ್ನಲ್ಲಿ ಮದ್ಯಪಾನ ಮಾಡಲು ಬಂದಾಗ ಬ್ಯಾಗ್ ಕಳೆದುಹೋಗಿದೆ ಎಂದು ವ್ಯಕ್ತಿಯೊಬ್ಬ 112 ಪೊಲೀಸರಿಗೆ ಸುಳ್ಳು ಕರೆ ಮಾಡಿದ ಘಟನೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಕರೆ ಮಾಡಿ ನಾನು ಬಾರ್ನಲ್ಲಿ ಮದ್ಯಪಾನ ಮಾಡಲು ಬಂದಾಗ ನನ್ನ ಬ್ಯಾಗ್ ಕಳೆದುಹೋಗಿದೆ ಎಂದು 112 ಸಿಬ್ಬಂದಿಗೆ ಫೋನ್ ಮಾಡಿದ್ದಾನೆ. ಫೋನ್ ಸ್ವೀಕರಿಸಿದ ಪೊಲೀಸರು ವ್ಯಕ್ತಿ ಹೇಳಿದ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಬಾರ್ ಮಾಲೀಕರ ಬಳಿ ವ್ಯಕ್ತಿಯ ಬ್ಯಾಗ್ ಬಗ್ಗೆ ವಿಚಾರಿಸಿದ್ದಾರೆ. ಆಗ ಬಾರ್ ಮಾಲೀಕರು ಆ ವ್ಯಕ್ತಿ ಬರುವಾಗ ಯಾವುದೇ ಬ್ಯಾಗ್ ತಂದಿಲ್ಲ ಎಂದು ತಿಳಿಸಿದ್ದಾರೆ. ಆದರೂ ಸಹ ಬಿಡದ ಪೊಲೀಸರು ಆ ವ್ಯಕ್ತಿಯಿಂದ ಆತನ ಮಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಪೊಲೀಸರು ಆ ವ್ಯಕ್ತಿಯ ಮಗಳ ಜೊತೆ ಮಾತನಾಡಿದಾಗ, ನಮ್ಮ ತಂದೆ ಮದ್ಯಪಾನ ಮಾಡಿ ಯಾವಾಗಲೂ ಸುಮ್ಮಸುಮ್ಮನೆ 112 ಸಿಬ್ಬಂದಿಗೆ ಫೋನ್ ಮಾಡುತ್ತಾರೆ ಎಂಬ ವಿಚಾರವನ್ನು ಮಗಳು ತಿಳಿಸಿದ್ದಾರೆ. ಇದರಿಂದ ಪೊಲೀಸರು ಫೋನ್ ಮಾಡಿದ ವ್ಯಕ್ತಿಗೆ ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
