ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಾಳೆ ತೆರೆ: ಅಂಬಾರಿ ಮೆರವಣಿಗೆ, ಬನ್ನಿ ಮುಡಿಯುವ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ!

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ದಸರಾ 2026
ಶಿವಮೊಗ್ಗ ದಸರಾ 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕಳೆದ 9 ದಿನಗಳಿಂದ ಶಿವಮೊಗ್ಗದಲ್ಲಿ ವೈಭವದಿಂದ ನಡೆಯುತ್ತಿರುವ ದಸರಾ ಹಬ್ಬಕ್ಕೆ ನಾಳೆ ಬನ್ನಿ ಮುಡಿಯುವ ಕಾರ್ಯಕ್ರಮದ ಮೂಲಕ ತೆರೆ ಬೀಳಲಿದೆ. ವಿವಿಧ ಪ್ರದೇಶಗಳಿಂದ ಸಾವಿರಾರು ಜನ ಈ ವೈಭವದ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದು, ಈ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ನಾಳೆ ಅಂದರೆ ಅಕ್ಟೋಬರ್ 21ರಂದು ಮಧ್ಯಾಹ್ನ 2:30ಕ್ಕೆ ಶಿವಪ್ಪ ನಾಯಕರ ಅರಮನೆ ಆವರಣದಲ್ಲಿರುವ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವೈಭವದ ಅಂಬಾರಿ ಮೆರವಣಿಗೆ ಹಾಗೂ ಉತ್ಸವ ಮೂರ್ತಿಯ ನಂದಿ ಧ್ವಜ ಪೂಜೆ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಈ ಬಾರಿಯ ಅಂಬಾರಿಯನ್ನು ಈಗಾಗಲೇ ಅನೇಕ ವರ್ಷಗಳ ಕಾಲ ಅಂಬಾರಿ ಹೊತ್ತ ಅನುಭವ ಹೊಂದಿರುವ ಸಾಗರ್ ಆನೆಯು ಹೊರಲಿದ್ದು, ಈ ಸಂದರ್ಭದಲ್ಲಿ ಆನೆಗೆ ಸೋಮಣ್ಣ ಹಾಗೂ ಬಹದ್ದೂರ್​ ಎಂಬ ಎರಡು ಆನೆಗಳು ಸಾಥ್ ನೀಡಲಿವೆ.

ಅರಮನೆ ಮೈದಾನದಿಂದ ಆರಂಭವಾಗುವ ಅಂಬಾರಿ ವೈಭವದ ಉತ್ಸವವು ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತದಿಂದ ದುರ್ಗಿಗುಡಿ ಮಾರ್ಗವಾಗಿ, ಜೈಲ್ ರಸ್ತೆ ಮೂಲಕ ಅಲ್ಲಮಪ್ರಭು ಮೈದಾನವನ್ನು ತಲುಪಲಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್ ಬಿ., ಜಿಲ್ಲಾ ಪಂಚಾಯತ್ ಸಿಇಒ ರಿಷಿ ಆನಂದ್ ಹಾಗೂ ಉಪ ಸಂರಕ್ಷಣಾಧಿಕಾರಿಗಳಾದ ಪ್ರಸನ್ನ ಕೃಷ್ಣ ಪಟಗಾರ್ ಭಾಗವಹಿಸಲಿದ್ದಾರೆ.

ಬನ್ನಿ ಮುಡಿದ ನಂತರ ರಾವಣ ದಹನ, ಅತ್ಯಾಕರ್ಷಕ ಪಟಾಕಿ ಸಿಡಿಮದ್ದು ಹಾಗೂ ವರ್ಣರಂಜಿತ ಲೇಸರ್ ಶೋ ಪ್ರದರ್ಶನ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor