
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಲಬಾರ್ ಪಿಟ್ ವೈಪರ್ ಎಂಬ ಅಪರೂಪದ ಹಾವು ನಗರದ ಗಾಡಿಕೊಪ್ಪ ಪೊಲೀಸ್ ಕ್ವಾಟ್ರಸ್‌ನಲ್ಲಿ ಪತ್ತೆಯಾಗಿದ್ದು, ಅದನ್ನು ಉರಗ ರಕ್ಷಕ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ.
ಮಂಜುನಾಥ್ ಎಂಬುವವರ ಮನೆ ಬಳಿ ಮಲಬಾರ್ ಪಿಟ್ ವೈಪರ್ ಎಂಬ ಹಾವು ಕಾಣಿಸಿಕೊಂಡಿದೆ. ರಸೆಲ್ ವೈಪರ್ ಹಾವಿನಂತೆಯೇ ಮೈಮೇಲೆ ಪಟ್ಟಿ ಹೊಂದಿರುವ ಈ ಹಾವು ಹಸಿರು ಹಾಗೂ ಕಂದು ಮಿಶ್ರಿತ ಮೈಬಣ್ಣದ್ದಾಗಿದ್ದು, ದೊಡ್ಡ ಗಾತ್ರದ ತಲೆಯನ್ನು ಹೊಂದಿದೆ. ಈ ವಿಭಿನ್ನವಾದ ಹಾವನ್ನು ಮೊದಲ ಬಾರಿಗೆ ನೋಡಿದ ಮಂಜುನಾಥ್ ಕೂಡಲೇ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿದ್ದಾರೆ.



ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್, ಅಡಗಿ ಕುಳಿತಿದ್ದ ಅಂದಾಜು 2 ಅಡಿ ಉದ್ದದ ಅಪರೂಪದ ಹಾವನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಾವಿನ ಬಗ್ಗೆ ಮಾಹಿತಿ ನೀಡಿದ ಅವರು, ಇದೊಂದು ವಿಷಪೂರಿತ ಹಾವಾಗಿದ್ದು ಮಲೆನಾಡು ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಂತಹ ಹಾವುಗಳಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

