ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವ ನಿನ್ನೆ ವಿಶೇಷವಾಗಿ ನಡೆಯಿತು, ಸೋಮಣ್ಣ ಆನೆಯ ರೋಷಾವೇಷ ಪ್ರಸಂಗದ ಹೊರತಾಗಿಯು ಬನ್ನಿ ಮುಡಿಯುವ ಸಂಪ್ರದಾಯ ನಿಲ್ಲಲಿಲ್ಲ. ಪರ್ಯಾಯ ಉತ್ಸವ ಮೂರ್ತಿಯನ್ನು ಕೊಂಡೊಯ್ದು, ಬನ್ನಿ ಮಂಟಪದಲ್ಲಿ ಬನ್ನಿ ಮುರಿಯಲಾಯಿತು. ವಿವಿಧ ಶಕ್ತಿ ದೇವತೆಗಳ ಮೆರವಣಿಗೆ, ಅಂಬು ಛೇದನ, ರಾವಣ ದಹನ ಹಾಗೂ ಸಿಡಿಮದ್ದು ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಗಳಾಗಿದ್ದವು.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಬುಧವಾರ ಸಂಜೆ ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿ.ಎಸ್. ರಾಜೀವ್ ಅವರು ನಗರದ ವಿವಿಧೆಡೆಯಿಂದ ಆಗಮಿಸಿದ್ದ ದೇವಾನುದೇವತೆಗಳ ಉತ್ಸವ ಮೂರ್ತಿಗಳ ಸಮ್ಮುಖದಲ್ಲಿ ಅಂಬು ಛೇದನ ನೆರವೇರಿಸಿದರು. ಈ ಸಂದರ್ಭದಲ್ಲಿ ಮೈದಾನದಲ್ಲಿ ನೆರೆದಿದ್ದ ಸಾರ್ವಜನಿಕರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯದಶಮಿಯ ಶುಭಾಶಯಗಳನ್ನು ಕೋರಿದರು.
ಅಂಬು ಛೇದನದ ಬೆನ್ನಲ್ಲೇ ದುಷ್ಟತನದ ಸಂಕೇತವಾದ ರಾವಣ ದಹನ ನಡೆಯಿತು . ನಂತರ ನಡೆದ ಸಿಡಿಮದ್ದು ಪ್ರದರ್ಶನದಲ್ಲಿ ಪಟಾಕಿಗಳ ಸದ್ದು ಮೊಳಗಿತು. ಆಕಾಶಕ್ಕೆ ಚಿಮ್ಮಿದ ಸಿಡಿಮದ್ದುಗಳು ವಿವಿಧ ಬಗೆಯ ಚಿತ್ತಾರಗಳನ್ನು ಮೂಡಿಸಿದವು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಖ್ಯಾತ ಗಾಯಕಿ ಸುರೇಖಾ ಹೆಗಡೆ ಮತ್ತು ಅವರ ತಂಡದವರು ಸಂಗೀತ ಸೀಮೋಲ್ಲಂಘನ ಕಾರ್ಯಕ್ರಮ ನಡೆಸಿಕೊಟ್ಟರು
ವಿಜಯದಶಮಿ ಉತ್ಸವದ ಅಂಗವಾಗಿ ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ವೀರಗಾಸೆ, ಡೊಳ್ಳು, ಚಂಡೆ, ತಟ್ಟಿರಾಯ, ಮಹಿಳಾ ಡೊಳ್ಳು ಹಾಗೂ ರೋಡ್ ಆರ್ಕೆಸ್ಟ್ರಾ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಕಲಾ ತಂಡಗಳ ಪ್ರದರ್ಶನದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಿಜಯದಶಮಿ ಮೆರವಣಿಗೆ ಸಾಗಿತು.
ಮೆರವಣಿಗೆ ಸಾಗಿದ ರಸ್ತೆಗಳ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ವಾಹನಗಳಲ್ಲಿ ಸಾಗುತ್ತಿದ್ದ ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳಿಗೆ ಕೈಮುಗಿದು ಭಕ್ತಿ ಸಮರ್ಪಿಸಿದರು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಆರಂಭವಾಯಿತು. ಅಲ್ಲಿಂದ ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಹಾಗೂ ಜೈಲು ರಸ್ತೆ ಮಾರ್ಗವಾಗಿ ಮೆರವಣಿಗೆ ಅಲ್ಲಮಪ್ರಭು ಮೈದಾನ ತಲುಪಿತು.
ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳ ಸಮ್ಮುಖದಲ್ಲಿ ಅಂಬು ಛೇದನ ಕಾರ್ಯಕ್ರಮ ನೆರವೇರಿತು. ನಂತರ ರಾವಣ ದಹನ ಮತ್ತು ಸಿಡಿಮದ್ದು ಪ್ರದರ್ಶನ ನಡೆಯಿತು. ವಿಜಯದಶಮಿ ಉತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಪೊಲೀಸರೊಂದಿಗೆ ಸ್ವಯಂಸೇವಕರ ತಂಡಗಳೂ ಕಾರ್ಯನಿರ್ವಹಿಸಿದವು.
