ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯೊಂದರಲ್ಲೇ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಸರ್ಕಾರದಿಂದ ಪಾವತಿಯಾಗಬೇಕಿರುವ ಬರೋಬ್ಬರಿ 3,250 ಕೋಟಿ ಹಣ ತಕ್ಷಣವೇ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು.
ರಾಜ್ಯಾದ್ಯಂತ ಒಟ್ಟಾರೆಯಾಗಿ ಸುಮಾರು 38,000 ಕೋಟಿಗೂ ಅಧಿಕ ಬಿಲ್ ಮೊತ್ತ ಬಾಕಿ ಉಳಿದಿದ್ದು, ಇದರಿಂದಾಗಿ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಿಂದಿನ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಸೂಕ್ತ ಅನುದಾನದ ಖಾತ್ರಿ ಇಲ್ಲದಿದ್ದರೂ ಸುಮಾರು 50,000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿತ್ತು. ಕಾಮಗಾರಿ ಮುಗಿಸಿ ಅಂತಿಮ ಬಿಲ್ ಸಲ್ಲಿಸಿ ನಾಲ್ಕು ವರ್ಷಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲ ಎಂದು ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಪೂರ್ಣಗೊಳಿಸಲು ಮನೆ, ಜಮೀನು ಹಾಗೂ ಆಸ್ತಿ-ಪಾಸ್ತಿಗಳನ್ನು ಬ್ಯಾಂಕುಗಳಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದ ಗುತ್ತಿಗೆದಾರರು ಈಗ ಕಂತು ಪಾವತಿಸಲಾಗದೆ ಹೈರಾಣಾಗಿದ್ದಾರೆ. ಹಲವರ ಆಸ್ತಿಗಳನ್ನು ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತುಕತೆ ನಡೆಸಿ ಬಾಕಿ ಹಣ ಬಿಡುಗಡೆ ಮಾಡಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಸಚಿವರ ನಿವಾಸ ಹಾಗೂ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುತ್ತಿಗೆದಾರರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
