ಮಲೆನಾಡುಟುಡೆ ಸುದ್ದಿ / ಸಾಗರ : ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರು ಕದ್ದು, ಬ್ಯಾಗ್ ಅನ್ನು ನೀರಿನ ಟ್ಯಾಂಕ್ನಲ್ಲಿ ಎಸೆದು ಹೋಗಿರುವ ಘಟನೆ ಸಾಗರದ ಪ್ರದೇಶವೊಂದರಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಗರದ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಎಫ್.ಐ.ಆರ್.ನಲ್ಲಿರುವ ಪ್ರಕಾರ, ಸಂತ್ರಸ್ತ ಮಹಿಳೆಯೊಬ್ಬರು ಮನೆಯ ಮಾಲೀಕರಿಂದ ಸುಮಾರು 2,58,000 ರೂಪಾಯಿ ಹಣವನ್ನು ಪಡೆದಿದ್ದರು. ಅದರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಮಾರು 4,000 ರೂಪಾಯಿಗಳನ್ನು ತೆಗೆದು, ಉಳಿದ 2,54,000 ರೂಪಾಯಿ ಹಣವನ್ನು ತಮ್ಮ ವ್ಯಾನಿಟಿ ಬ್ಯಾಗ್ನಲ್ಲಿ ಹಾಕಿ ಗಾಡ್ರೇಜ್ನಲ್ಲಿ ಇಟ್ಟಿದ್ದರು. ಇದಾದ ನಂತರ ಮಾರನೇ ದಿನ ಪರಿಚಿತ ವ್ಯಕ್ತಿಯೊಬ್ಬ ಸಂತ್ರಸ್ತ ಮಹಿಳೆಯಿಂದ ಪಡೆದುಕೊಂಡಿದ್ದ ಸುಮಾರು 30,000 ರೂಪಾಯಿ ಹಣವನ್ನು ವಾಪಸ್ ಕೊಡಲು ಬಂದಿದ್ದಾನೆ. ಆ ಹಣವನ್ನು ಪಡೆದ ಮಹಿಳೆ ಅದನ್ನು ಇಡಲು ಗಾಡ್ರೇಜ್ ಓಪನ್ ಮಾಡಿದಾಗ ಆಕೆಗೆ ಆಘಾತ ಕಾದಿತ್ತು.
ಅದೇನೆಂದರೆ ಆಕೆ ಬೀರುವಿನ ಒಳಗೆ ವ್ಯಾನಿಟಿ ಬ್ಯಾಗ್ ಕಾಣಿಸಿರಲಿಲ್ಲ. ಎಲ್ಲೆಡೆ ಹುಡುಕಿದಾಗ ಪಕ್ಕದ ರೂಮ್ನ ನೀರಿನ ಟ್ಯಾಂಕ್ ಒಂದರಲ್ಲಿ ಖಾಲಿ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ. ನಂತರ ಅನುಮಾನಗೊಂಡ ಮಹಿಳೆ ಪರಿಚಿತ ವ್ಯಕ್ತಿ ಕೊಟ್ಟ ಹಣವನ್ನು ನೋಡಿದಾಗ, ಅದರಲ್ಲಿ ಆಕೆ ಹಿಂದೆಯೇ 2,54,000 ರೂಪಾಯಿ ಹಣದಲ್ಲಿ ಗುರುತಿಸಿದ್ದ ಕಲೆಯಾದ ನೋಟು ಒಂದು ಈ 30,000 ರೂಪಾಯಿ ಹಣದಲ್ಲಿ ಕಾಣಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ತನ್ನ ಬಳಿ ಸಾಲ ಪಡೆದಿದ್ದ ಯುವಕನೇ ನನ್ನ ಹಣವನ್ನು ಕದ್ದು, ಅದರಲ್ಲಿ ನನಗೆ 30,000 ರೂಪಾಯಿ ಹಣವನ್ನು ನೀಡಿದ್ದಾನೆ ಎಂದು ಆರೋಪಿಸಿ ಸಾಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
