ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಪತ್ರಕರ್ತರೊಬ್ಬರ ಮನೆಯ ಬೀಗ ಮುರಿದ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿರುವ ಘಟನೆ ವರದಿಯಾಗಿದೆ. ತಮ್ಮ ತಂದೆಯ ನಿವಾಸದಲ್ಲಿ ಆಯೋಜಿಸಲಾಗಿದ್ದ ಖುರಾನ್ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಟುಂಬ ಸದಸ್ಯರು ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಆರ್.ಎಂ.ಎಲ್. ನಗರದ ಕಿಣಿ ಲೇಔಟ್‌ನ ಶನಿಮಹಾತ್ಮ ದೇವಸ್ಥಾನದ ರಸ್ತೆಯಲ್ಲಿ ವಾಸವಿರುವ ಪತ್ರಕರ್ತ ಶಿ.ಜು. ಪಾಶಾ ಅವರ ಮನೆಯಲ್ಲಿ ಕಳ್ಳತಮ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಶಿ.ಜು. ಪಾಶಾ ಅವರ ತಂದೆಯ ಮನೆಯಲ್ಲಿ ಖುರಾನ್ ಪಠಣ ಕಾರ್ಯಕ್ರಮವಿದ್ದ ಕಾರಣ, ಪಾಶಾ ಅವರು ತಮ್ಮ ಪತ್ನಿಯೊಂದಿಗೆ ಅಲ್ಲಿಗೆ ತೆರಳಿದ್ದರು. ಸಂಜೆ ಸುಮಾರು 4 ಗಂಟೆಯ ವೇಳೆಗೆ ಅವರ ಪತ್ನಿ ಮನೆಗೆ ಮರಳಿದಾಗ, ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ತೆರಳಿ ನೋಡಿದಾಗ ಮಲಗುವ ಕೋಣೆಯಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ
ದೂರಿನ ಪ್ರಕಾರ , 1,02,500 ಮೌಲ್ಯದ 29 ಗ್ರಾಂ 823 ಮಿಲಿ ತೂಕದ ಚಿನ್ನದ ನೆಕ್ಲೇಸ್, 1,90,000 ಮೌಲ್ಯದ 15 ಗ್ರಾಂ ತೂಕದ ಚಿನ್ನದ ಹ್ಯಾಂಗಿಂಗ್ಸ್, 70,000 ಮೌಲ್ಯದ 8 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್ ಹಾಗೂ 1,15,000 ಮೌಲ್ಯದ 10 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳನ್ನು ದೋಚಲಾಗಿದೆ. ಇದರೊಂದಿಗೆ 30,000 ಮೌಲ್ಯದ 200 ಗ್ರಾಂ ತೂಕದ ಮೂರು ಜೊತೆ ಬೆಳ್ಳಿ ಕಾಲುಚೈನ್‌ಗಳು ಮತ್ತು 1,50,000 ನಗದು ಹಣ ಸೇರಿದಂತೆ ಒಟ್ಟು ಸುಮಾರು 6,57,500 ಮೌಲ್ಯದ ಆಭರಣ ಹಾಗೂ ಹಣ ಕಳವಾಗಿದೆ.
ಕಳ್ಳತನ ನಡೆದ ವಿಷಯ ತಿಳಿದ ತಕ್ಷಣ ದೊಡ್ಡಪೇಟೆ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
